ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೂಢ ಅಲ್ಲ, ಮೂಲ ನಂಬಿಕೆ: ನಾಡಿಗೇರ

Mainashree
Updated On : 11 Dec 2013, 11:47 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಡಿ. 10
ಹಿಂದೂ ಧಾರ್ಮಿಕ ನಂಬಿಕೆಗಳನ್ನು ಹತ್ತಿಕ್ಕುವ ಕಾಯ್ದೆ ಜಾರಿಗೆ ತರಲು ಸರ್ಕಾರ ಯತ್ನಿಸುತ್ತಿದೆ. ನಮ್ಮ ಆಚರಣೆಗಳ ವಿರುದ್ಧ ಕಾನೂನು ರೂಪಿಸಲು ಇವರು ಯಾರು? ಅವು ಮೂಢ ನಂಬಿಕೆಗಳಲ್ಲ, ಮೂಲ ನಂಬಿಕೆಗಳು ಎಂದು ಸರ್ಕಾರಕ್ಕೆ ತಿಳಿಯಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಧಾರವಾಡ ವಿಭಾಗದ ವ್ಯವಸ್ಥಾಪಕ ಅಶೋಕ ನಾಡಿಗೇರ ಹೇಳಿದರು.
ತಾಲೂಕಿನ ಬಂಕಾಪುರ ಪುರಸಭೆ ಆವರಣದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ಹಿಂದೂಗಳ ಅವನತಿ ಹಿಂದೂಗಳಿಂದಲೇ ಆಗುತ್ತಿದೆ. ಇದರ ಅರಿವೇ ಇಲ್ಲದೆ ನೂರಾರು ವರ್ಷಗಳ ಕಾಲ ನಾವು ಪರಕೀಯರ ಆಳ್ವಿಕೆಗೆ ಒಳಗಾದೆವು. ಹಿಂದೂಗಳಲ್ಲಿ ಸಂಘಟನೆಯ ಪ್ರಜ್ಞಾವಂತಿಕೆ ಬರುವ ತನಕ ಇದು ಹೀಗೆಯೇ ಸಾಗುತ್ತದೆ. ಸರ್ವ ಸಮಾಜಗಳಲ್ಲಿ ಸಮಾನತೆ ತರಲು ಸಂಘ ಶ್ರಮಿಸುತ್ತಿದೆ. ಯಾವುದೇ ಸಮಾಜದ ವಿರುದ್ಧ ಸಂಘಟನೆ ಅಲ್ಲ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎ.ಕೆ. ಆದವಾನಿಮಠ ಅಧ್ಯಕ್ಷತೆ ವಹಿಸಿ, ಭಾರತೀಯರ ಮೂಲ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಲು ಸಂಘಟನೆ ಅವಶ್ಯವಾಗಿದೆ. ಗೋ ಸಂರಕ್ಷಣೆ ಜತೆಗೆ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಸರ್ಕಾರ ಘೋಷಣೆ ಮಾಡಬೇಕಿದೆ ಎಂದರು.
ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಮನುಷ್ಯರೆಲ್ಲರೂ ತಂದೆ-ತಾಯಿ, ಗುರುವಿನ ಹಾಗೂ ಭೂಮಿ ಋಣ ತೀರಿಸಬೇಕಾಗುತ್ತದೆ. ಜನ್ಮಭೂಮಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು. ಸೋಮಶೇಖರಯ್ಯ ಗೌರಿಮಠ ನಿರೂಪಿಸಿದರು. ವೀರೇಶ ಹಿರೇಮಠ ಪ್ರಾರ್ಥಿಸಿದರು. ಲಿಂಗರಾಜ ಹಳವಳ್ಳಿ ಸ್ವಾಗತಿಸಿದರು. ವೀರನಗೌಡ ಪಾಟೀಲ ವಂದಿಸಿದರು. ಇದಕ್ಕೂ ಮುನ್ನ ನೂರಾರು ಗಣವೇಷಧಾರಿ ಸ್ವಯಂ ಸೇವಕರಿಂದ ಪಟ್ಟಣದಲ್ಲಿ ಪಥ ಸಂಚಲನ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement