ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 11 Dec 2013, 11:48 am

ಅಧಿಕಾರ ಸ್ವೀಕಾರ
ಹಾವೇರಿ: ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಸಾವಿತ್ರಿ ವಿನಾಯಕ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಈ ಹಿಂದೆ ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇಂದಿನಿಂದ ಪ್ರವಚನ
ಹಾನಗಲ್ಲ: ಪಟ್ಟಣದ ವಿರಕ್ತ ಮಠದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣ ಸಮಾರಂಭದ ಅಂಗವಾಗಿ 7 ದಿನಗಳ ಪ್ರವಚನ ಡಿ. 11ರಂದು ಸಂಜೆ 7.30ಕ್ಕೆ ಆರಂಭವಾಗಲಿದೆ. ಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ವಹಿಸುವರು. ಶರಣರು ಮತ್ತು ಹಾನಗಲ್ಲ ಕುಮಾರ ಶಿವಯೋಗಿಗಳವರ ಜೀವನ ದರ್ಶನ ಪ್ರವಚನವನ್ನು ಬೆಳಗಾವಿಯ ಶ್ರೀಕುಮಾರ ದೇವರು ನಡೆಸಿಕೊಡುವರು. ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಪ್ರವಚನ ಉದ್ಘಾಟಿಸುವರು. ಬೊಮ್ಮನಹಳ್ಳಿ ಶಿವಯೋಗೀಶ್ವರ ಮಹಾಸ್ವಾಮಿಗಳು ನೇತೃತ್ವ, ಮಾಜಿ ಸಚಿವ ಸಿ.ಎಂ. ಉದಾಸಿ ಅಧ್ಯಕ್ಷತೆ ವಹಿಸಲಿದ್ದಾರೆ.
13ರಂದು ಕೆಡಿಪಿ ಸಭೆ
ಹಾವೇರಿ: ನವೆಂಬರ್ ಮಾಹೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಡಿ. 13ರಂದು ಬೆಳಗ್ಗೆ 11 ಗಂಟೆಗೆ ಜಿಪಂ ಕಾರ್ಯಾಲಯದ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ಜಿಪಂ ಸಿಇಒ ಕೆ.ಬಿ. ಆಂಜನಪ್ಪ ತಿಳಿಸಿದ್ದಾರೆ.
ಅವಿರೋಧ ಆಯ್ಕೆ
ಹಾವೇರಿ: ತಾಲೂಕಿನ ಕುಳೇನೂರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಬ್ಬೂರ ಗ್ರಾಮದ ಕಲ್ಲವ್ವ ಪರಮೇಶಪ್ಪ ದೇವಗಿರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ ಚುನಾವಣಾಧಿಕಾರಿಯಾಗಿದ್ದರು.
ಕ್ರೀಡಾಕೂಟ ಮುಂದೂಡಿಕೆ
ಹಾವೇರಿ: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಹಿನ್ನೆಲೆಯಲ್ಲಿ ಇಲ್ಲಿನ ಹೊಸಮಠ ಪ್ರೌಢಶಾಲೆಯಲ್ಲಿ ನ. 11 ಹಾಗೂ 12ರಂದು ವಿಶ್ವ ಅಂಗವಿಕಲರ ದಿನಾಚರಣೆ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಸ್.ಎಸ್. ಅಡಿಗ ತಿಳಿಸಿದ್ದಾರೆ.
ಒಡೆಯರ್ ನಿಧನ: ಸಂತಾಪ
ಶಿಗ್ಗಾಂವಿ: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನಕ್ಕೆ ಮಾಜಿ ಸಂಸದ ಮಂಜುನಾಥ ಸಿ. ಕುನ್ನೂರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಹಾರಾಜನಿಲ್ಲದ ಮೈಸೂರು ಅನಾಥವಾಗಿದೆ ಎಂದಿರುವ ಅವರು, ರಾಜಮನೆತನದ ಕೊನೆಯ ಕೊಂಡಿಯಂತಿದ್ದ ಅತ್ಯಂತ ಗೌರವಾನ್ವಿತ ವ್ಯಕ್ತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದಿಂದ ನಾಡಿನ ಜನತೆಗೆ ಅತೀವ ದುಃಖವಾಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ವಾಣಿಜ್ಯೋದ್ಯಮ ಸಂಸ್ಥೆಗೆ ಆಯ್ಕೆ
ರಾಣಿಬೆನ್ನೂರು: ನಗರದ ರೇಲ್ವೆ ನಿಲ್ದಾಣ ಹತ್ತಿರವಿರುವ ಸಿ.ಎಲ್. ಜಂಬಗಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಕಂಪನಿಯ ಮಾಲೀಕ, ಜಯಣ್ಣ (ಸುಜೀತ) ಜಂಬಗಿ ಅವರನ್ನು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 2013-14ನೇ ವರ್ಷದ ಅವಧಿಗಾಗಿ ಸಹ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಸಿದ್ದೇಶ್ವರ ಜಿ. ಕಮ್ಮಾರ ತಿಳಿಸಿದ್ದಾರೆ.
ಪ್ರೊ. ರಾವ್‌ಗೆ ಸನ್ಮಾನ
ಹಾವೇರಿ: ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರೊ. ಸಿಎನ್‌ಆರ್ ರಾವ್ ಅವರನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾವೇರಿ ಘಟಕದ ವತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಬಿ. ಹಿರೇಮಠ, ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಆರ್.ಎಸ್. ಪಾಟೀಲ, ಜಿಲ್ಲಾ ಘಟಕದ ಕಾರ್ಯದರ್ಶಿ ಎ.ಎಚ್. ಕಬ್ಬಿಣಕಂತಿಮಠ, ಕೆ.ಸಿ. ಕುಲಕರ್ಣಿ, ಎಂ.ಜಿ. ಹಿರೇಮಠ, ಜಿ.ಎಸ್. ಹತ್ತಿಮತ್ತೂರ, ವಿ.ಎಂ. ಗಡ್ಡದೇವರಮಠ, ರಜಗೌಡ ಪಾಟೀಲ ಇದ್ದರು.
ಉಚಿತ ತರಬೇತಿ ಶಿಬಿರ
ಹಾವೇರಿ: ಕುಮಟಾದ ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಡಿ. 18ರಿಂದ ಜ. 16ರ ವರೆಗೆ 30 ದಿನಗಳ ಕಾಲ ಕಂಪ್ಯೂಟರ್ ಡೇಟಾ ಎಂಟ್ರಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಊಟ, ವಸತಿ ಸಹಿತ ತರಬೇತಿ  ಉಚಿತ. 18ರಿಂದ 45 ವಯೋವುತಿಯ ನಿರುದ್ಯೋಗಿಯಾಗಿದ್ದು, ಸ್ವ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಕನ್ನಡ ಓದಲು ಬರೆಯಲು ಬರಬೇಕು. ಶಿಬಿರಾರ್ಥಿಗಳಿಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ. ಆಸಕ್ತರು ಡಿ. 12ರಂದು ಬೆಳಗ್ಗೆ 11ಕ್ಕೆ ಸಂದರ್ಶನಕ್ಕೆ ಹಾಜರಾಗಬಹುದು. ಉತ್ತರ ಕನ್ನಡ ಜಿಲ್ಲೆ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕುಗಳ ಅಭ್ಯರ್ಥಿಗಳಿಗೆ ಸೀಮಿತ. ಆಸಕ್ತ ಯುವಕ, ಯುವತಿಯರು ಮಾಹಿತಿಯೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ನಿರ್ದೇಶಕರು, ಸಿಂಡ್ ಗ್ರಾಮೀಣ ಸ್ವ-ಸಹಾಯ ಉದ್ಯೋಗ ತರಬೇತಿ ಸಂಸ್ಥೆ (ಸಿಂಡ್‌ಆರ್‌ಸೆಟಿ), ಕೈಗಾರಿಕಾ ವಸಾಹತು ಪ್ರದೇಶ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ ಜಿಲ್ಲೆ ಇವರಿಗೆ ಸಲ್ಲಿಸಬೇಕು. ಮಾಹಿತಿಗೆ ದೂ. 08386-220530 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
6ನೇ ವಿಜ್ಞಾನ ಸಮ್ಮೇಳನ
ಹಾವೇರಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 6ನೇ ವಾರ್ಷಿಕ ಸಮ್ಮೇಳನವನ್ನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಡಿ. 20 ಹಾಗೂ 21ರಂದು ಎರಡು ದಿನಗಳ ಕಾಲ ಆವಿಷ್ಕಾರಕ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತೇಜನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ವಿಷಯದಡಿ ಆಯೋಜಿಸಲಾಗಿದೆ. ವಿವರಗಳಿಗೆ ಕ್ರೈಸ್ಟ್ ವಿಶ್ವವಿದ್ಯಾನಿಲಯದ ವೆಬ್‌ಸೈಟ್ ವೀಕ್ಷಿಸಲು ಅಕಾಡೆಮಿಯ ಡಾ೤ ಎಚ್. ಹೊನ್ನೇಗೌಡ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement