ಹೆಸ್ಕಾಂ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
ರಾಣಿಬೆನ್ನೂರು: ಹೆಸ್ಕಾಂ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ನಗರಸಭೆ ಸದಸ್ಯ ಪ್ರಭುಸ್ವಾಮಿ ಕರ್ಜಗಿಮಠ ಮಂಗಳವಾರ ನಗರದ ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ಎದುರು ಪ್ರತಿಭಟಿಸಿದರು.
ನಗರಸಭೆಯ ಸದಸ್ಯ ಪ್ರಭುಸ್ವಾಮಿ ಕಜ್ಜರ್ಗಿಮಠ, ರೈತ ಸಂಘದ ಮುಖಂಡ ಬಾಬಣ್ಣ ಕೋಪ್ಪದ, ಬಸವರಾಜ ತಾವರಗೊಂದಿ, ನಾಗರಾಜ ಮರ್ಜಗಿ, ರುದ್ರಪ್ಪ ಹೊಳಲ ಪ್ರತಿಭಟನೆ ಆರಂಭಿಸಿದಾಗ, ವಿದ್ಯುತ್ ಸಂಪರ್ಕಕ್ಕಾಗಿ ಜನರು 15 ದಿನ ಹಾಗೂ ಅದಕ್ಕಿಂತಲೂ ಹಿಂದೆ ಸಲ್ಲಿಸಿದ್ದ ಅರ್ಜಿಗಳನ್ನು ಹುಡುಕಿಕೊಂಡು ಬಂದ ಸಿಬ್ಬಂದಿ, ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಬಗ್ಗದ ಪ್ರಭುಸ್ವಾಮಿ ಕರ್ಜಗಿಮಠ, ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರು ಎಲ್ಲಿ ಹೋಗಿದ್ದಾರೆ? ಅವರು ಸ್ಥಳಕ್ಕೆ ಆಗಮಿಸಲಿ. 20ಕ್ಕೂ ಅಧಿಕ ದಿನಗಳಿಂದ ಕೆಲಸ-ಕಾರ್ಯಗಳಿಗೆ ತೊಂದರೆಯಾಗಲು ಕಾರಣವೇನು ಎಂದು ತಿಳಿಸಲು ಪಟ್ಟು ಹಿಡಿದರು. ಬಳಿಕ ಕಚೇರಿಗೆ ಬಂದ ಎನ್.ಸಿ. ಬೆಳಕೇರಿ, ಸಾರ್ವಜನಿಕರ ಅರ್ಜಿಗಳಿಗೆ ಅನುಮೋದನೆ ಪಡೆಯಲು ಮೇಲಧಿಕಾರಿಗಳಿಗೆ ಕಳುಹಿಸಲು ಸಿದ್ಧಪಡಿಸಿದ ಕಡತಗಳನ್ನು ತೋರಿಸಿ, ವಿಳಂಬಕ್ಕೆ ಕ್ಷಮೆ ಯಾಚಿಸಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.