ಗುಂಪು ಮನೆ ವಿತರಿಸಲು ಆಗ್ರಹ
ಶಿಗ್ಗಾಂವಿ: ಗುಂಪು ಮನೆ ಯೋಜನೆಯಲ್ಲಿ ಫಲಾನುಭವಿ ಭರಿಸಬೇಕಾದ ಹಣವನ್ನು ಕಂತುಗಳ ಪ್ರಕಾರ ಭರಿಸಿಕೊಂಡು ಬಡವರಿಗೆ ಗುಂಪು ಮನೆಗಳನ್ನು ವಿತರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿತರಕ್ಷಣಾ ಮತ್ತು ಜಾಗೃತಿ ಸಂಘ ಪ್ರತಿಭಟಿಸಿ ಪುರಸಭೆ ವ್ಯವಸ್ಥಾಪಕಿ ಗಂಗಮ್ಮ ವೀರಾಪುರಗೆ ಮನವಿ ಅರ್ಪಿಸಿತು.
ಗುರುವಾರ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ವೃತ್ತದಿಂದ ಹಳೆ ಬಸ್ ನಿಲ್ದಾಣ ಮುಖಾಂತರ ಮೆರವಣಿಗೆ ಮೂಲಕ ಪುರಸಭೆಗೆ ತೆರಳಿ ಮನವಿ ಅರ್ಪಿಸಿ, ಜಿಲ್ಲಾಧ್ಯಕ್ಷ ಡಿ.ಎಸ್. ಓಲೇಕಾರ ಮಾತನಾಡಿದರು. ಪಟ್ಟಣಕ್ಕೆ 15 ವರ್ಷಗಳ ಬಳಿಕ ಸೂರು ಒದಗಿಸುವ ಕಾರ್ಯ ಶ್ಲಾಘನೀಯ. ಆದರೆ ಒಬ್ಬ ಬಡ ಕೂಲಿ-ಕಾರ್ಮಿಕನಿಗೆ ವರ್ಷ ಪೂರ್ತಿ ಉದ್ಯೋಗ ದೊರಕುವುದಿಲ್ಲ. ಸೀಮಿತ ಆದಾಯದಲ್ಲಿಯೇ ಮಕ್ಕಳ ಪಾಲನೆ ಪೋಷಣೆ, ಶಿಕ್ಷಣ ನಿರ್ವಹಿಸುವುದು ಕಷ್ಟಕರ. ಇಂತಹ ವೇಳೆ ಗುಂಪು ಯೋಜನೆಗೆ ರು. 40 ಸಾವಿರ ಕಟ್ಟಲು ತಿಳಿಸಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪುರಸಭೆ ಬಡವರ ಅನುಕೂಲಕ್ಕಾಗಿ ಮನೆ ನಿರ್ಮಿಸಿತೋ ಅಥವಾ ಉಳ್ಳವರ ಅನುಕೂಲಕ್ಕಾಗಿಯೋ ಎಂಬುದು ಗೊತ್ತಾಗುತ್ತಿಲ್ಲ. ಪುರಸಭೆ ನಿರ್ಗತಿಕರ, ಆರ್ಥಿಕವಾಗಿ ಹಿಂದುಳಿದವರ ಹಿತ ಕಾಯುವುದಾದರೆ ರು. 20 ಸಾವಿರ ಭರಿಸಿಕೊಂಡು ಮನೆ ನೀಡಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ 322 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ಬಹುತೇಕರು ಮನೆ ಹೊಂದಿದ್ದಾರೆ. ನಿರ್ಗತಿಕರಿಗೆ, ಕಡುಬಡವರಿಗೆ ಗುಂಪು ಮನೆಗಳು ಸಿಗುವಂತಾಗಬೇಕು. ಮನೆ ವಿತರಣೆ ವೇಳೆ ಅಂಗವಿಕಲರಿಗೆ ಪ್ರಾಶಸ್ತ್ಯ ನೀಡಬೇಕು. ಪುರಸಭೆ ನಮ್ಮ ಮನವಿಗೆ ಸಕೈರಾತ್ಮಕವಾಗಿ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಜೀಲಾನಿ ಜಂಗ್ಲಿ, ಉಪಾಧ್ಯಕ್ಷ ಇಮಾಮ ಹುಸೇನ ಅದಂಬಾಯಿ, ಶಹರ ಅಧ್ಯಕ್ಷ ಅಬ್ಬಾಸಲಿ ಹಮ್ಮಗಿ, ನಾಗಪ್ಪ ಕುರವತ್ತಿ, ಮಹ್ಮದ ಶಫಿ ನಧಾಪ, ಅಲ್ತಾಫ ಖಲೀಫನವರ, ಮಹಬೂಬ ಶೇಖಸನದಿ ಇದ್ದರು.