ಪ್ರಯಾಣಿಕರಿಗೂ ತಟ್ಟಿದ ಪ್ರತಿಭಟನೆ ಬಿಸಿ
ಬ್ಯಾಡಗಿ: ಮೋಟೆಬೆನ್ನೂರು ಬಳಿ ಗುರುವಾರ ರೈತರು ಹೆದ್ದಾರಿ ತಡೆ ನಡೆಸಿದ್ದರಿಂದಾಗಿ 4 ತಾಸಿಗೂ ಹೆಚ್ಚು ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಪ್ರಯಾಣಿಕರು ಪ್ರತಿಭಟನೆ ಬಿಸಿ ಅನುಭವಿಸಿದರು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾ ಸ್ಥಳದಿಂದ ಐದು ಕಿ.ಮೀ. ದೂರದಲ್ಲೇ ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಕೆಲವು ವಾಹನಗಳು ಕಾಕೋಳ-ಬ್ಯಾಡಗಿ-ಮಲ್ಲೂರ-ನೆಲೋಗಲ್ಲ ಮಾರ್ಗವಾಗಿ ಹುಬ್ಬಳ್ಳಿ ಕಡೆಗೂ, ಹಾವೇರಿ-ಗುತ್ತಲ ಮಾರ್ಗವಾಗಿ ಬೆಂಗಳೂರು ಕಡೆಗೂ ಪ್ರಯಾಣಿಸಿದವು. ಬಸ್ ಚಾಲಕರು ಹಾಗೂ ನಿರ್ವಾಹಕರು ರಸ್ತೆ ಮಧ್ಯೆ ಕುಳಿತು ಹರಟೆ ಹೊಡೆಯುತ್ತ ಕಾಲ ಕಳೆದರು. ಎಸ್ಪಿ ಶಶಿಕುಮಾರ್ ನೇತೃತ್ವದಲ್ಲಿ ಎಎಸ್ಪಿ ಮಾರ್ಗದರ್ಶನದಲ್ಲಿ ಸೂಕ್ತ ಭದ್ರತೆ ಕಲ್ಪಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಇಬ್ಬರು ಡಿವೈಎಸ್ಪಿ, 5 ಸಿಪಿಐ, 14 ಪಿಎಸ್ಐ, 18 ಎಎಸ್ಐ, 29 ಹೆಡ್ ಕಾನ್ಸ್ಟೇಬಲ್, 80 ಪೊಲೀಸರನ್ನು, 4 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ 1 ಅಗ್ನಿಶಾಮಕ ವಾಹನವನ್ನು ನಿಯೋಜಿಸಲಾಗಿತ್ತು.