ಮರಳು ನಿರ್ಬಂಧ ಸಡಿಲಿಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಡಿ. 12
ಕಟ್ಟಡ ನಿರ್ಮಾಣ ಸಾಮಗ್ರಿಗಳಿಗೆ ಸರ್ಕಾರ ವಿಧಿಸಿರುವ ನಿರ್ಬಂಧ ತೆಗೆದು ಹಾಕಬೇಕೆಂದು ಆಗ್ರಹಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು, ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಹಾನಗಲ್ಲಿನಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಪಟ್ಟಣದ ಕುಮಾರೇಶ್ವರ ವಿರಕ್ತಮಠದಿಂದ ಮೆರವಣಿಗೆ ನಡೆಸಿದ ಕಟ್ಟಡ ಕಾರ್ಮಿಕರು, ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸುರೇಶ ರಾಯ್ಕರ ಮಾತನಾಡಿ, ತಾಲೂಕಿನಾದ್ಯಂತ ಮರಳು, ಜಲ್ಲಿಕಲ್ಲು ಸಾಗಾಟ ಸಮಸ್ಯೆಯಿಂದ ಕಟ್ಟಡ, ರಸ್ತೆಗಳ ಎಲ್ಲ ಕಾಮಗಾರಿಗಳು ಸ್ಥಗಿತಗೊಂಡಿವೆ. ರಾಜ್ಯ ಸರ್ಕಾರದ ಕಾನೂನು ಸರಳಗೊಳ್ಳಬೇಕಿದೆ.
ಸ್ಪಷ್ಟವಾದ ಮರಳು ನೀತಿ ನಿರ್ಧರಿಸಬೇಕು. ಮರಳು ಎತ್ತುವ ಸ್ಥಳವನ್ನು ಗುರುತಿಸಬೇಕು. ಈ ಎಲ್ಲ ಸಮಸ್ಯೆಗಳ ಕುರಿತು ಯಾವುದೇ ಶಾಸಕರು, ಜನಪ್ರತಿನಿಧಿಗಳು ಧ್ವನಿ ಎತ್ತದಿರುವುದು ಖೇದದ ಸಂಗತಿ. ಈ ಸಮಸ್ಯೆ ಬಗೆಹರಿಸಿದರೆ ಸರ್ಕಾರದ ಆದಾಯ ಹೆಚ್ಚಿಸಬಹುದು. ಕಾರ್ಮಿಕರ ನಿರುದ್ಯೋಗ ಸಮಸ್ಯೆ ನೀಗುವುದು. ಸರ್ಕಾರ ನಿದ್ದೆಯಿಂದ ಎಚ್ಚೆತ್ತು ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಲಸವಿಲ್ಲದೆ ತೊಂದರೆ: ಗುತ್ತಿಗೆದಾರ ಶಿವಕುಮಾರ ದೇಶಮುಖ ಮಾತನಾಡಿ, ಗುತ್ತಿಗೆದಾರರು, ಕೂಲಿಕಾರ್ಮಿಕರು ಮರಳು ಸಮಸ್ಯೆಯಿಂದಾಗಿ ಕೆಲಸವಿಲ್ಲದೆ ಕುಳಿತಿದ್ದಾರೆ. ಹಲವು ಕಾಮಗಾರಿಗಳಿಗೆ ಸಾಲ ಮಾಡಿ ಹಣ ತೊಡಗಿಸಿದ್ದೇವೆ. ಅರ್ಧಕ್ಕೆ ನಿಲ್ಲಿಸಿದರೆ ಹಣ ಪಾವತಿಯಾಗಲಾರದು. ಮರಳು ಸಾಗಾಟಕ್ಕೆ ಪರವಾನಗಿ ನೀಡುತ್ತಿಲ್ಲ. ನೀಡುವವರು ಯಾರೆಂಬುದನ್ನೂ ಸರ್ಕಾರ ಸ್ಪಷ್ಟಪಡಿಸಿಲ್ಲ. ಸರ್ಕಾರ ಇನ್ನು ಎಂಟು ದಿನಗಳಲ್ಲಿ ಮರಳು, ಖಡಿ ನೀತಿಯನ್ನು ಸ್ಪಷ್ಟಪಡಿಸಬೇಕು. ಬಡ ಕಾರ್ಮಿಕರಿಗೆ ಸಂಬಂಧಿಸಿದ ಇಲಾಖೆಗಳು ಕಿರುಕುಳ ನೀಡದೆ ಸಹಕರಿಸಬೇಕು ಎಂದು ಒತ್ತಾಯಿಸಿದರು.
ದಂಡ ಪಾವತಿಸುವಂತಾಗಿದೆ: ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಖಬೂಲ ಅಹ್ಮದ ಪಠಾಣ ಮಾತನಾಡಿ, ಇತ್ತೀಚೆಗೆ ಮರಳು, ಜಲ್ಲಿಕಲ್ಲು, ಇಟ್ಟಿಗೆಗಳ ಸಾಗಾಟ ನಿರ್ಬಂಧದಿಂದ ಖಾಸಗಿ ಕಟ್ಟಡಗಳೂ ಸೇರಿ ಎಲ್ಲ ಕಾಮಗಾರಿಗಳು ಸ್ಥಗಿತಗೊಂಡಿವೆ. ಆಶ್ರಯ ಮನೆ, ಶೌಚಾಲಯಗಳನ್ನು ನಿರ್ಮಿಸಲೂ ಸಮಸ್ಯೆಯಾಗಿದೆ. ಕಟ್ಟಡ ಕಾರ್ಮಿಕರು ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಇಟ್ಟಿಗೆ, ಮರಳು, ಜಲ್ಲಿಕಲ್ಲುಗಳು ನಿತ್ಯ ಬಳಕೆಯ ವಸ್ತುಗಳಾಗಿದ್ದು, ಇವುಗಳಿಗೆ ಗಣಿಗಾರಿಕೆ ಕಾನೂನು ಅಳವಡಿಸಬಾರದು. ಸಮಸ್ಯೆ ಹಿನ್ನೆಲೆಯಲ್ಲಿ ಸರ್ಕಾರದ ಕಾಮಗಾರಿಗಳೂ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ಗುತ್ತಿಗೆದಾರರು ದಂಡ ಪಾವತಿಸುವಂತಾಗಿದೆ. ರಾಜ್ಯಪಾಲರು ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದರು.
ಗುತ್ತಿಗೆದಾರರಾದ ಕುಮಾರ ಹತ್ತಿಕಾಳ, ಶಿವಕುಮಾರ ದೇಶಮುಖ, ಸಲೀಂ ಮಿಠಾಯಗಾರ, ಎ.ಎಂ. ಗುತ್ತಲ, ಎಸ್.ಆರ್. ಹಾದಿಮನಿ, ಪಿ. ರುದ್ರಗೌಡ, ರವಿ ದೇಶಪಾಂಡೆ, ಟಿ.ಆರ್. ಬಂಕಾಪುರ, ಪಿ.ಬಿ. ಹಾವೇರಿ, ನಾಶೀರ ಇಮ್ಮುಸಾಬನವರ, ಈರಣ್ಣ ಗೌಳಿ, ವಿಶ್ವಾಸ ಕೋಟೇಶ್ವರ, ಅಭಿಯಂತರ ಎ.ಎಂ. ನಾಶಿಪುಡಿ, ದುದ್ದು ಅಕ್ಕಿವಳ್ಳಿ, ಮುಕ್ತಾರ ಅಹ್ಮದ ಕೇಣಿ, ಮಾಲತೇಶ ಮಾಳಿಗುತ್ತೆಣ್ಣನವರ, ನಜೀರಅಹ್ಮದ ಕಡೆಮನಿ, ರಿಯಾಜಅಹ್ಮದ ಡೊಳ್ಳೇಶ್ವರ, ಮಂಜುನಾಥ ಪೂಜಾರ, ಪರಶುರಾಮ ಮೂಲಿಮನಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.