ಸಹಕಾರಿ ಸಂಘದಲ್ಲೇ ಬೆಳೆವಿಮೆ ಪಾವತಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 12
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕವೇ ಬೆಳೆವಿಮೆ ಹಣ ಬಿಡುಗಡೆ, ಕಳಪೆ ಹತ್ತಿ ಬೀಜಕ್ಕೆ ಪರಿಹಾರ ಮತ್ತು ಗೋವಿನಜೋಳಕ್ಕೆ ಕನಿಷ್ಠ ರು. 2 ಸಾವಿರ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತ ಸಂಘ ಹಸಿರುಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಹಾಗೂ ಸಹಕಾರಿ ಸಂಘಗಳ ಆಡಳಿತ ಮಂಡಳಿ ಸದಸ್ಯರು ಗುರುವಾರ ಮೋಟೆಬೆನ್ನೂರು ಬಳಿ 4 ತಾಸಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ಬಳಿ ಜಮಾಯಿಸಿದ ರೈತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಬಳಿಕ ನೂರಾರು ವಾಹನಗಳಲ್ಲಿ ಮೋಟೆಬೆನ್ನೂರಿಗೆ ತೆರಳಿದರು. ಮೆರವಣಿಗೆಯುದ್ದಕ್ಕೂ ಕೆಸಿಸಿ ವ್ಯವಸ್ಥಾಪಕ ನಿರ್ದೇಶಕ, ಆಡಳಿತ ಮಂಡಳಿ, ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರೈತರಿಂದಲೇ ನಡೆಯತ್ತಿರುವ ಸರ್ಕಾರಕ್ಕೆ ಪಂಚೇಂದ್ರಿಯಗಳಿದ್ದರೆ ಅನ್ನದಾತನನ್ನು ಬೀದಿಗೆ ತರುತ್ತಿದ್ದಿಲ್ಲ. ಜಿಲ್ಲಾಡಳಿತವೂ ಆತ್ಮಗೌರವ ಕಳೆದುಕೊಂಡಿದ್ದು, ರೈತನ ಹಿತಾಸಕ್ತಿ ದೂರ ತಳ್ಳಿ ಬೀಜ ಕಂಪನಿ ಮಾಲೀಕರ ಅಣತಿಯಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಅಸಮರ್ಥ ಕೃಷಿ ಸಚಿವ
ಕಳಪೆ ಬಿಟಿ ಹತ್ತಿಯಿಂದ ಸಾವಿರಾರು ಎಕರೆಯಲ್ಲಿ ಬೆಳೆದ ಹತ್ತಿಗಿಡದಲ್ಲಿ ಹೂವು ಕಾಯಿಗಳು ಬಿಟ್ಟಿಲ್ಲ. ಸಮೀಕ್ಷೆಯ ನೆಪದಲ್ಲಿ ಕಾಲ ಕಳೆಯುತ್ತಿರುವ ಸರ್ಕಾರ ಅಪ್ರತ್ಯಕ್ಷವಾಗಿ ಕಳ್ಳರಿಗೆ ರಕ್ಷಣೆ ನೀಡುತ್ತಿದೆ. ರಾಜ್ಯದ ಕೃಷಿ ಮಂತ್ರಿ ಅಸಮರ್ಥ ಎಂಬುದು ಸಾಬೀತಾಗಿದೆ. ಜಿಲ್ಲೆಯ ಎಲ್ಲ ಶಾಸಕರ ನರಗಳು ಸತ್ತು ಹೋಗಿವೆ. ಪ್ರಮುಖ ವಾಣಿಜ್ಯ ಬೆಳೆ ಮೆಕ್ಕೆಜೋಳಕ್ಕೆ ರು. 1310 ಬೆಂಬಲ ಬೆಲೆ ನಿಗದಿಪಡಿಸಿದೆ. ಅದು ಒಂದು ಚೀಲ ಡಿಎಪಿ ಗೊಬ್ಬರಕ್ಕೆ ಸಮನಾಗಿದೆ. ಸದನದಲ್ಲಿ ಚರ್ಚಿಸಿ, ಕನಿಷ್ಠ ರು. 2 ಸಾವಿರ ಬೆಂಬಲ ಬೆಲೆ ನಿಗದಿಪಡಿಸಲು ಪ್ರಯತ್ನಿಸುವಂತೆ ರೈತರ ನಿಯೋಗ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗೇಲಿಮಾಡಿದರು.
ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಸರ್ಕಾರದ ವಿರುದ್ಧ ನಡೆಸಿದ ಹೋರಾಟದ ಫಲವಾಗಿ ಬೆಳೆವಿಮೆ ಬಿಡುಗಡೆಯಾಗಿದೆ, ಆದರೆ ಸಹಕಾರಿ ಸಂಘಗಳ ಕಾರ್ಯದರ್ಶಿಗಳನ್ನು ನಂಬದಿರುವ ಕೆಸಿಸಿ ಬ್ಯಾಂಕ್ ಎಂಡಿ ಏಕಪಕ್ಷೀಯ ನಿರ್ಧಾರ ಕೈಗೊಂಡು, ತಮ್ಮ ಶಾಖೆಗಳಿಂದಲೇ ವಿತರಿಸುವಂತೆ ಸೂಚಿಸಿದ್ದಾರೆ. ಕೆಸಿಸಿ ಬ್ಯಾಂಕನ್ನು ಅವನತಿಗೆ ತಳ್ಳಿರುವ ನಿರ್ದೇಶಕ ಮಂಡಳಿ ಭ್ರಷ್ಟರ ಕೂಟ. ತಮ್ಮ ಸಾಚಾತನವನ್ನು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಸವಾಲೆಸೆದರು.
ಉತ್ತರ ಕನ್ನಡ ಯಾವ ರಾಜ್ಯದಲ್ಲಿದೆ?
ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕೆಸಿಸಿ ಬ್ಯಾಂಕ್ ಎಂಡಿ ಆದೇಶ ಇಷ್ಟೆಲ್ಲ ಅವಾಂತರಗಳಿಗೆ ಕಾರಣ. ಉತ್ತರ ಕನ್ನಡ ಜಿಲ್ಲೆಯಲ್ಲಿ ಡಿಡಿಸಿ ಬ್ಯಾಂಕ್ ಸಹಕಾರಿ ಸಂಘಕ್ಕೆ ನೇರವಾಗಿ ಹಣ ನೀಡಿದ್ದು, ಬೆಳೆವಿಮೆ ಪಾವತಿಯಾಗುತ್ತಿದೆ. ಆ ಜಿಲ್ಲೆ ಯಾವ ರಾಜ್ಯದಲ್ಲಿದೆ? ರೈತರ ಠೇವಣಿಯಿಂದ ಬೇಳೆ ಬೇಯಿಸಿಕೊಂಡ ಕೆಸಿಸಿ ಬ್ಯಾಂಕ್, ನಿರ್ದೇಶಕರ ಸಂಬಂಧಿಗಳಿಗೆ ಕೃಷಿಯೇತರ ಸಾಲ ನೀಡಿ, ವಸೂಲು ಮಾಡಲಾಗದೆ ಈಗ ಕೃಷಿ ಸಾಲವನ್ನೇ ಸ್ಥಗಿತಗೊಳಿಸಿದೆ ಎಂದು ದೂರಿದರು.
ಶಶಿಧರ ಛತ್ರದಮಠ ಮಾತನಾಡಿ, ಬೆಳೆವಿಮೆ ತುಂಬಿಸಿಕೊಳ್ಳುವ ವೇಳೆ ಸಹಕಾರಿ ಸಂಘಗಳನ್ನು ಬಳಸಿಕೊಂಡು, ವಿತರಣೆ ಹೊತ್ತಲ್ಲಿ ಕೆಸಿಸಿ ಬ್ಯಾಂಕ್ ಕ್ಯಾತೆ ತೆಗೆದಿದೆ. ಬ್ಯಾಡಗಿ ತಾಲೂಕಿನಲ್ಲೇ ಸಾವಿರಾರು ಫಲಾನುಭವಿಗಳಿದ್ದು, ಬೆರಳೆಣಿಕೆ ಸಿಬ್ಬಂದಿಯಿಂದ ಬೆಳೆವಿಮೆ ಬಡವಡೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಬಾರದೇ ಇದ್ದಾಗ ಆಕ್ರೋಶಗೊಂಡ ರೈತ ಮುಖಂಡರು, ಅರ್ಧ ಗಂಟೆ ಅವಧಿಯಲ್ಲಿ ಆದೇಶ ಕೈ ಸೇರದಿದ್ದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಸಿದರು.
ಚಿಕ್ಕಪ್ಪ ಛತ್ರದ, ಬಸವರಾಜ ಸಂಕಣ್ಣನವರ, ದಿಲೀಪ್ ಕುಮಾರ ಮೇಗಳಮನಿ, ಚನ್ನವೀರಗೌಡ ಬುಡ್ಡನಗೌಡ್ರ, ಡಾ ಕೆ.ವಿ. ದೊಡ್ಡಗೌಡ್ರ, ಮಂಜು ತೋಟದ, ಚಂದ್ರಣ್ಣ ಶೆಟ್ಟರ, ವಿಜಯಭರತ್ ಬಳ್ಳಾರಿ, ಮಲ್ಲಿಕಾರ್ಜುನ ಬೆಳವಿಗಿ, ಮಂಜುನಾಥ ಬೆನಕನಕೊಂಡ ಇದ್ದರು.
ನಿಮಗಿಂತ ರಮ್ಯಾ ವಾಸಿ!
ಬ್ಯಾಡಗಿ: ನಿಮಗಿಂತ ಚಿತ್ರನಟಿ ರಮ್ಯಾ ಅವರೇ ಎಷ್ಟೋ ವಾಸಿ ಎಂದು ರೈತರು ಹಾವೇರಿ ಜಿಲ್ಲೆಯ ಎಲ್ಲ ಶಾಸಕರಿಗೆ ಚಾಟಿ ಬೀಸಿದರು.
ಕಳಪೆ ಹತ್ತಿ ಬೀಜಕ್ಕೆ ಪರಿಹಾರ ಹಾಗೂ ಗೋವಿನಜೋಳಕ್ಕೆ ಬೆಂಬಲ ಬೆಲೆ ಹೆಚ್ಚಿಸುವಂತೆ ಆಗ್ರಹಿಸಿ ಮೋಟೆಬೆನ್ನೂರು ಬಳಿ ಹೆದ್ದಾರಿ ತಡೆದು ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಸ್ಥಳಕ್ಕೆ ಭೇಟಿದ ನೀಡಿದ ಸಂಸದೆ ರಮ್ಯಾ, ನಾನೂ ರೈತನ ಮಗಳೇ (ಅಲ್ಲದಿದ್ದರೂ) ಎಂದರು. ಅಲ್ಲಿಂದಲೇ ಕೇಂದ್ರ ಹಾಗೂ ರಾಜ್ಯ ಕೃಷಿ ಸಚಿವರಿಗೆ ದೂರವಾಣಿ ಕರೆ ಮಾಡಿದರು. ಇದನ್ನು ಎಲ್ಲರೂ ಮೆಚ್ಚಿಕೊಳ್ಳಬೇಕು ಎಂದರು.
ರೈತ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಶಾಸಕರು ಮೊದಲು ನಿಲ್ಲಿಸಬೇಕು. ಬದುಕಿದ್ದಾಗ ರೈತನ ಸಮಸ್ಯೆ ಕೇಳದೆ ಸತ್ತ ಮೇಲೆ ಪರಿಹಾರ ನೀಡಿರುವುದು ಯಾವ ಪುರುಷಾರ್ಥಕ್ಕೆ? ಯಾರ ಮತಗಳನ್ನು ಪಡೆದು ವಿಧಾನಸೌಧದ ಮೆಟ್ಟಿಲೇರಿದ್ದೀರಿ ಎಂಬುದನ್ನು ಅಂದಿನ ಭಂಡ (ಬಿಜೆಪಿ) ಇಂದಿನ ಷಂಡ (ಕಾಂಗ್ರೆಸ್) ಸರ್ಕಾರಗಳು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
15 ದಿನಗಳ ಗಡವು
ಜಿಲ್ಲೆಯ ಬಹುತೇಕ ಶಾಸಕರು ರೈತರ ಮಕ್ಕಳಾಗಿದ್ದರೂ ರೈತರ ಸಮಸ್ಯೆಯನ್ನು ಆಲಿಸುವ ಧೈರ್ಯ ಪ್ರದರ್ಶಿಸಿಲ್ಲ. 15 ದಿನಗಳಲ್ಲಿ ಗೋವಿನಜೋಳಕ್ಕೆ ಬೆಂಬಲ ಬೆಲೆ ಹೆಚ್ಚಿಸದಿದ್ದರೆ ಹಾಗೂ ಕಳಪೆ ಹತ್ತಿ ಬೀಜಕ್ಕೆ ಪರಿಹಾರ ಘೋಷಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಶಾಸಕರ ಜನ ಸಂಪರ್ಕ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಕೆಂಚಳ್ಳೇರ ಎಚ್ಚರಿಸಿದರು.