50 ವರ್ಷಗಳ ಕಾಮಗಾರಿ 5 ವರ್ಷದಲ್ಲಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಡಿ. 13
ಐವತ್ತು ವರ್ಷದಲ್ಲಾಗದ ಅಭಿವೃದ್ಧಿ ಕಾರ್ಯಗಳು ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಆಗಿವೆ. ವಿವಿಧ ಯೋಜನೆಗಳ ಅಡಿಯಲ್ಲಿ 666 ಕಿ.ಮೀ. ಸಿಸಿ ರಸ್ತೆಯನ್ನು ನಿರ್ಮಾಣ ಮಾಡುವ ಮೂಲಕ ರಸ್ತೆ ಕ್ರಾಂತಿ ಮಾಡಲಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತಾಲೂಕಿನ ಚಾಕಾಪುರ ಗ್ರಾಮದಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ರು. 8 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು. ಜನರು ಆಶೀರ್ವಾದ ಮಾಡಿ ನೀಡಿದ ಅಧಿಕಾರವನ್ನು ಜನರ ಅಭಿವೃದ್ಧಿಗಾಗಿ ಬಳಸಿ, ಜನರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕೆಲಸಮಾಡಿದ ತೃಪ್ತಿ ನನಗಿದೆ. ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿಯನ್ನು ಅಳಿಸಿ ಅಭಿವೃದ್ಧಿ ಮಾಡಿದ್ದು ಐದು ವರ್ಷದ ಸಾಧನೆ ಎಂದರು.
ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಬೇಡಿಕೆಗೆ ತಕ್ಕಂತೆ ದೂರದೃಷ್ಟಿಯಿಂದ ಯೋಜನೆಗಳನ್ನು ರೂಪಿಸಲಾಗಿದೆ. ಶಿಕ್ಷಣ, ಆರೋಗ್ಯ, ರಸ್ತೆ ಸೇರಿ ಎಲ್ಲ ಪ್ರಮುಖ ರಂಗಗಳಲ್ಲಿ ಯಶಸ್ವಿಯಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಸಮಗ್ರ ಕುಡಿಯುವ ನೀರು ಯೋಜನೆಯಲ್ಲಿ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಅನುಮೋದನೆ ದೊರೆತಿದ್ದು, ರು. 8 ಕೋಟಿ ಮಂಜೂರಾಗಿದೆ ಎಂದರು.
ಜನರನ್ನು ಮಂಕು ಮಾಡುವ ಹಾಗೂ ಸುಳ್ಳು ಹೇಳುವ ಕಾಲ ದೂರವಾಗಿದೆ. ಅಂಥವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಸರ್ವ ಕಾಲಕ್ಕೂ ಸಮರ್ಥ ನಾಯಕರನ್ನೇ ಜನ ಆಯ್ಕೆ ಮಾಡುತ್ತಾರೆ. ಎರಡನೇ ಬಾರಿಗೆ ವಿಧಾನಸಭೆಗೆ ತಮ್ಮನ್ನು ಕಳುಹಿಸಿದ ಕ್ಷೇತ್ರದ ಮತದಾರರ ಹಿತಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವೆ ಎಂದರು.
ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ, ಜಿಪಂ ಸದಸ್ಯ ಶಶಿಧರ ಹೊನ್ನಣ್ಣನವರ, ಸದಸ್ಯೆ ಉಷಾ ಬಿಳೆಕುದರಿ, ಗ್ರಾಮದ ಮುಖಂಡ ಯಲ್ಲಪ್ಪ ಬಗಾಡೆ ಮಾತನಾಡಿದರು. ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಾ ಆಡಿನ, ತಾಪಂ ಉಪಾಧ್ಯಕ್ಷ ನಿಂಗಪ್ಪ ಹರಿಜನ, ತಾಪಂ ಸದಸ್ಯ ತಿಪ್ಪಣ್ಣ ಸಾತಣ್ಣವರ, ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಗ್ರಾಪಂ ಅಧ್ಯಕ್ಷೆ ಚನ್ನಮ್ಮ ವಾಲ್ಮೀಕಿ, ಸದಸ್ಯೆ ರೇಣವ್ವ ಹರಿಜನ, ಬಸಪ್ಪ ಗಂಜೀಗಟ್ಟಿ, ಮಲ್ಲಪ್ಪ ಬಾಲೆಹೊಸೂರು, ರಾಮಣ್ಣ ಹೈಬತ್ತಿ ಉಪಸ್ಥಿತರಿದ್ದರು. ಶಿಕ್ಷಕ ಗುರುರಾಜ್ ಚಂದ್ರಿಕೆ ನಿರ್ವಹಿಸಿದರು.