ಮಕ್ಕಳ ಪ್ರತಿಭೆ ಬೆಳಗಿಸಿ: ಶೋಭಾ ನಿಸ್ಸೀಮಗೌಡ್ರ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಡಿ. 13ಮಕ್ಕಳ ಸುಪ್ತ ಪ್ರತಿಭೆ ಗುರುತಿಸಿ, ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಜಿಪಂ ಉಪಾಧ್ಯಕ್ಷೆ ಡಾ ಶೋಭಾ ನಿಸ್ಸೀಮಗೌಡ್ರ ಹೇಳಿದರು.ಪಟ್ಟಣದ ನಳಂದ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರಸಕ್ತ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಪ್ರತಿಭಾ ಕಾರಂಜಿ ಉದ್ಘಾಟಿಸಿದ ಅವರು, ಪ್ರತಿಭೆಯನ್ನು ಹೇಗೆ ಬೆಳಗಿಸಿಕೊಳ್ಳಬೇಕು ಎಂಬ ಅರಿವು ವಿದ್ಯಾರ್ಥಿಗೆ ಇರುವುದಿಲ್ಲ. ಪಾಲಕ ಹಾಗೂ ಶಿಕ್ಷಕ ಸಮೂಹ ಈ ನಿಟ್ಟಿನಲ್ಲಿ ನೆರವಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ನಿತ್ಯ ಕನಿಷ್ಠ ಅರ್ಧ ಗಂಟೆ ಯೋಗಾಭ್ಯಾಸದ ಪರಿಪಾಠ ಹಾಕಿಕೊಳ್ಳಬೇಕು. ಇದರಿಂದ ಏಕಾಗ್ರತೆಯೂ ವೃದ್ಧಿಸುತ್ತದೆ ಎಂದರು.ಜಿಪಂ ಸದಸ್ಯ ಶಶಿಧರ ಹೊನ್ನಣ್ಣನವರ ಮಾತನಾಡಿ, ಮೂಲ ಸಂಸ್ಕೃತಿಯ ಜಾನಪದ ಕಲೆ ಮತ್ತು ಸಾಹಿತ್ಯದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಜತೆಗೆ ಅವರಲ್ಲಿ ಕಲೆ ಬೇರೂರುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.ಜಿಪಂ ಸದಸ್ಯ ಬಿ.ಟಿ. ಇನಾಮತಿ, ಸಿ.ಎಸ್. ಪಾಟೀಲ, ವಿರೂಪಾಕ್ಷಪ್ಪ ಆಡಿನ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಉಪಾಧ್ಯಕ್ಷ ನಿಂಗಪ್ಪ ಹರಿಜನ, ಸದಸ್ಯ ತಿಪ್ಪಣ್ಣ ಸಾತಣ್ಣನವರ, ಫರಿದಾಬಾನು ಶೇಖಸನದಿ, ಶಾಂತಮ್ಮ ಬೊಮ್ಮನಹಳ್ಳಿ, ನಳಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ ಪಿ.ಆರ್. ಪಾಟೀಲ, ಎಫ್.ಸಿ. ಪಾಟೀಲ, ಬಿಇಓ ಎಸ್.ಎಲ್. ಭಜಂತ್ರಿ, ಸಿ.ಪಿ. ಮೂಲಿಮನಿ, ಆರ್.ವಿ. ಶೆಟ್ಟೆಪ್ಪನವರ, ಎಂ.ಎಚ್. ಹೊಂಗಲ, ಬಿ.ಎಸ್. ಪಟ್ಟಣಶೆಟ್ಟಿ, ಆರ್.ಎಸ್. ದುಂದೂರ, ಪಿ.ಎಲ್. ದೊಡ್ಡಮನಿ, ಎಸ್.ವೈ. ಕಬನೂರ, ಸಿ.ಎನ್. ಕಲಕೋಟೆ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಲ್. ಹೊಳಲಾಪುರ, ಎಸ್.ಎಂ. ದೇವತಿ, ಎಂ.ಬಿ. ಹಳೇಮನಿ, ಸಿ.ಎಸ್. ಚರಂತಿಮಠ ಇದ್ದರು. ಎಸ್.ಆರ್. ತುಪ್ಪದ ನಿರೂಪಿಸಿದರು. ಎಚ್.ಐ. ಹಸಬಿ ವಂದಿಸಿದರು.