ದೇಶದ ಭ್ರಷ್ಟ ವ್ಯವಸ್ಥೆ ತಡೆಯಲು ಪ್ರಾಮಾಣಿಕರು ಬೇಕು: ಸಂಕಮ್ಮ
ಬ್ಯಾಡಗಿ: ಆಂತರಿಕ ಭದ್ರತೆ ಇಲ್ಲದೆ ದೇಶ ನಲುಗುತ್ತಿದೆ. ಭ್ರಷ್ಟಾಚಾರ ತಡೆಗಟ್ಟಲು ಆಡಳಿತ ವ್ಯವಸ್ಥೆಯಲ್ಲಿ ಪ್ರಾಮಾಣಿಕರ ಅಗತ್ಯವಿದೆ ಎಂದು ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಅಧ್ಯಕ್ಷೆ ಸಂಕಮ್ಮ ಸಂಕಣ್ಣನವರ ಹೇಳಿದರು.
ಪಟ್ಟಣದ ಶಿಕ್ಷಕರ ಕಾಲನಿಯಲ್ಲಿ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ದೇಶಭಕ್ತರ ಪ್ರಾಮಾಣಿಕ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದೆ. ಗಾಂಧೀಜಿ ಅವರ ರಾಮರಾಜ್ಯ, ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಜೈಜವಾನ್ ಜೈಕಿಸಾನ್ ಪದಗಳಿಗೆ ಅರ್ಥವೇ ಇಲ್ಲದಂತಾಗಿದೆ. ಅವರ ಕನಸುಗಳನ್ನು ನುಚ್ಚುನೂರು ಮಾಡಿದ್ದೇ ಭಾರತೀಯರ ಸಾಧನೆಯಾಗಿದೆ. ದೇಶದಲ್ಲಿ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳು ಹೇರಳವಾಗಿದ್ದರೂ ಹುಟ್ಟುವ ಪ್ರತಿಯೊಂದು ಮಗುವಿನ ಮೇಲೆ ರು. 28 ಸಾವಿರ ಸಾಲವಿದೆ. ಬಡತನ, ನಿರುದ್ಯೋಗ, ಅನಕ್ಷರತೆ ಸಮಸ್ಯೆಗಳು ಜೀವಂತವಾಗಿವೆ ಎಂದು ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಆಂಜನೇಯ ಯುವಕ ಸಂಘದ ಅಧ್ಯಕ್ಷ ಮಲ್ಲನಗೌಡ ಭದ್ರಗೌಡ್ರ, ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಬದುಕುವ ಹಕ್ಕು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದರು.
ಕಾರ್ಯದರ್ಶಿ ಹರೀಶ ಮಾಳಪ್ಪನವರ ಪ್ರಾಸ್ತಾವಿಕ ಮಾತನಾಡಿದರು. ಜಿ.ಬಿ. ಸಂಕಣ್ಣನವರ, ವಿಶ್ವನಾಥ ಛತ್ರದ, ಕರಿಬಸವ ಹರಿಯಾಳದವರ, ಜಗದೀಶ ಹಾಲನಗೌಡ್ರ, ಮಾಲತೇಶ ಎಲಿ, ಗಂಗಾಧರ ಮಠದ, ಶಶಿಧರ ಕಲ್ಲಾಪುರ, ಮಂಜುನಾಥ ದೇಸೂರ, ಹಾಲೇಶ ಸಂಕಣ್ಣನವರ, ಶಂಕ್ರಣ್ಣ ಬಡ್ಡಿಯವರ ಇದ್ದರು. ಶಂಭು ಮಠದ ಸ್ವಾಗತಿಸಿದರು. ಎಚ್. ಪ್ರಕಾಶ ವಂದಿಸಿದರು.