ನಾಳೆ ಗದುಗಿನಲ್ಲಿ ಸವಿತಾ ಸಮಾಜ ಸಮ್ಮೇಳನ
ಬ್ಯಾಡಗಿ: ಗದುಗಿನಲ್ಲಿ ಡಿ. 17ರಂದು ರಾಜ್ಯ ಮಟ್ಟದ ಸವಿತಾ ಸಮಾಜದ ಮಹಾ ಸಮ್ಮೇಳನ ನಡೆಯಲಿದ್ದು, ತಾಲೂಕಿನ ಸವಿತಾ ಸಮಾಜದ ಬಾಂಧವರು ಭಾಗವಹಿಸುವಂತೆ ತಾಲೂಕು ಘಟಕದ ಅಧ್ಯಕ್ಷ ಸೋಮಯ್ಯ ಕರ್ನೂಲ ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ 9 ಗಂಟೆಗೆ ಸವಿತಾ ಮಹರ್ಷಿಗಳ ಭಾವಚಿತ್ರದ ಮೆರವಣಿಗೆ ವೀರನಾರಾಯಣ ದೇವಸ್ಥಾನದಿಂದ ಹೊರಟು ವಿವಿಧ ವೃತ್ತಗಳ ಮುಖಾಂತರ ಕೆ.ಎಚ್. ಪಾಟೀಲ ಸಭಾಭವನವನ್ನು ತಲುಪುವುದು. ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ಸಮಾರಂಭದ ಸಾನ್ನಿಧ್ಯ ವಹಿಸುವರು. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ಸವಿತಾ ಸಮಾಜದ ರಾಜ್ಯಾಧ್ಯಕ್ಷ ಎನ್. ಸಂಪತ್ ಕುಮಾರ್, ಕ್ರಿಕೆಟಿಗ ಅಭಿಮನ್ಯು ಮಿಥುನ್ ಸಮ್ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಓಲಿಂಪಿಯಾಡ್‌ಗೆ ಆಯ್ಕೆ
ರಾಣಿಬೆನ್ನೂರು: ಇತ್ತಿಚೆಗೆ ಹಾವೇರಿಯ ಹುಕ್ಕೇರಿಮಠ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಓಲಿಂಪಿಯಾಡ್ ಪರೀಕ್ಷೆಯಲ್ಲಿ ಭಾಗವಹಿಸಿದ್ದ ತಾಲೂಕಿನ ಗುಡಿಹೊನ್ನತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಚಿನ ಬಸವರಾಜಪ್ಪ ಹೊಳಲು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಲಕ್ಷ್ಮಣ ಅಭಿನಂದಿಸಿದ್ದಾರೆ.
18ಕ್ಕೆ ಸರ್ಕಾರಿ ನೌಕರರ ಕ್ರೀಡಾಕೂಟ, ಸಭೆ
ರಾಣಿಬೆನ್ನೂರು: ತಾಲೂಕು ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಂಘದ ಪ್ರಗತಿಯ ಕುರಿತು ಚರ್ಚಿಸಲು ನಗರದ ಮಿನಿ ವಿಧಾನಸೌಧದ ಪಕ್ಕದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಡಿ. 18ರಂದು ಸಂಜೆ 5 ಗಂಟೆಗೆ ಅಧ್ಯಕ್ಷ ಆರ್.ಡಿ. ಹೊಂಬರಡಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ಕಿನ್ನಾಳ ಆಗಮಿಸಲಿದ್ದಾರೆ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದು, ಸಲಹೆ-ಸೂಚನೆ ನೀಡಬೇಕೆಂದು ಪ್ರಧಾನ ಕಾರ್ಯದರ್ಶಿ ವಿಕ್ರಮ ಸಣ್ಣಮನಿ ತಿಳಿಸಿದ್ದಾರೆ.
20ರಂದು ದ್ಯಾಮವ್ವ ದೇವಿ ಕಾರ್ತಿಕೋತ್ಸವ
ಹಾವೇರಿ: ನಗರದ ದ್ಯಾಮವ್ವ ದೇವಿ ಓಣಿಯಲ್ಲಿರುವ ಗ್ರಾಮ ದೇವತೆ ದ್ಯಾಮವ್ವ ದೇವಿ ಕಾರ್ತಿಕೋತ್ಸವ ಡಿ. 20ರಂದು ಸಂಜೆ 7 ಗಂಟೆಗೆ ಜರುಗಲಿದೆ. ದೇವಿಗೆ ವಿಶೇಷ ಅಲಂಕಾರ, ಪೂಜೆ, ಮಹಾಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕು ಎಂದು ದೇವಸ್ಥಾನದ ಅರ್ಚಕ ದೊಡ್ಡ ದ್ಯಾಮಣ್ಣ ಬಡಿಗೇರ, ದೇವಸ್ಥಾನ ಸೇವಾ ಸಮಿತಿ ಸಂಚಾಲಕ ಅಶೋಕ ಮುದಗಲ್ ತಿಳಿಸಿದ್ದಾರೆ.