ಬೆಳಗಾವಿ ವಿಚಾರ-ಮಹಾಜನ್ ವರದಿ ಅಂತಿಮ: ವಿನಯಗೌಡ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 15
ಬೆಳಗಾವಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ. ಭಾಷಾವಾರು ಪ್ರತ್ಯೇಕತೆಗಾಗಿ ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಡಲು ಸಾಧ್ಯವಿಲ್ಲ ವಿನಯಗೌಡ ಪಾಟೀಲ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನೂತನ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಬಿ.ಡಿ. ಪಾಟೀಲರ ಸ್ಮರಣಾರ್ಥ ದತ್ತಿ ಉಪನ್ಯಾಸ ಉದ್ಘಾಟಿಸಿದ ಅವರು, ಮಹಾಜನ್ ವರದಿ ಜಾರಿಗೆ ಎರಡೂ ರಾಜ್ಯಗಳ ಜನರ ಸಮ್ಮತಿ ಇದೆ. ಎಂಇಎಸ್ ಸಂಘಟನೆ ಕನ್ನಡಿಗರ ವಿರುದ್ಧ ಮಾತನಾಡಿದರೆ ಅದು ಎಲ್ಲ ಮರಾಠಿಗರ ಅಭಿಪ್ರಾಯವಾಗಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಡಾ ಎಸ್.ಎನ್. ನಿಡಗುಂದಿ ಮಾತನಾಡಿ, ಕಸಾಪ ಕಾರ್ಯಕ್ರಮ ನಡೆಸಲು ರಾಜಕಾರಣಿಗಳ ಮನೆ ಬಾಗಿಲು ಕಾಯುವ ಸ್ಥಿತಿ ಎದುರಾಗಿದ್ದು ವಿಪರ್ಯಾಸ. ಕನ್ನಡ ಉಳಿಸಿಕೊಳ್ಳಲು ಕನ್ನಡಪರ ಹೋರಾಟಗಳು ನಡೆಯಬೇಕಾಗಿದೆ. ನ್ಯಾಯಾಲಯ ಹಾಗೂ ಸರ್ಕಾರದ ಎಲ್ಲ ಕಡತಗಳು ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ದತ್ತಿದಾನಿ ಬಿ.ಡಿ. ಪಾಟೀಲರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಸಾಪ ತಾಲೂಕಾಧ್ಯಕ್ಷ ಮಾಲತೇಶ ಅರಳಿಮಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧ್ಯಕ್ಷ ಜಯದೇವ ಶಿರೂರ, ನೂತನ ಶಿಕ್ಷಣ ಸಂಸ್ಥೆ ಮುಖ್ಯ ಶಿಕ್ಷಕಿ ಬಿ.ಎಸ್. ಮಾಳೇನಹಳ್ಳಿ, ಗೌರವ ಕಾರ್ಯದರ್ಶಿ ವಿ.ವಿ. ಮಾತನವರ ಅತಿಥಿಗಳಾಗಿದ್ದರು. ಮೇಘಾ ತಳವಾರ ಸಂಗಡಿಗರು ಪ್ರಾರ್ಥಿಸಿದರು, ಚೇತನಾ ಸಂಕಣ್ಣನವರ ಸ್ವಾಗತಿಸಿದರು. ಚೈತ್ರಾ ಬಿದರಕಟ್ಟಿ ನಿರೂಪಿಸಿದರು. ಪ್ರಕಾಶ ಫಕ್ಕೀರಣ್ಣನವರ ವಂದಿಸಿದರು.