ಕುತೂಹಲ ಕೆರಳಿಸಿ, ಆಸಕ್ತಿ ಅರಳಿಸಿ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 16
ವಿದ್ಯಾರ್ಥಿಗಳು ಸದಾ ಕುತೂಹಲಿಗಳು. ಹೊಸದನ್ನು ಕಲಿಯಲು, ನೋಡಲು ಅವರ ಮನಸ್ಸು ಸದಾ ಹಾತೊರೆಯುತ್ತದೆ. ದೃಶ್ಯ-ಶ್ರವ್ಯ ಮಾಧ್ಯಮಗಳನ್ನು ಒಳಗೊಂಡಿರುವ ಪ್ರಯೋಗ, ಪ್ರಾತ್ಯಕ್ಷಿಕೆಗಳಿಂದ ಮಾತ್ರ ಕಲಿಕೆ ಸುಲಭವಾಗುತ್ತದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ನುಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬಿಜೆವಿಎಸ್ ರಾಜ್ಯ ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಶಿವಲಿಂಗೇಶ್ವರ ಡಿ.ಇಡಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಐಸಾನ್ ಧೂಮಕೇತುವಿನ ತಿಳಿವಳಿಕೆ ಶಿಬಿರ ಉದ್ಘಾಟಿಸಿದ ಶ್ರೀಗಳು, ಬೋಧನೆಯಲ್ಲಿ ಕೇವಲ ಉಪನ್ಯಾಸ ಪದ್ಧತಿಗೆ ಜೋತು ಬೀಳದೆ ಪ್ರಯೋಗ, ಪ್ರಾತ್ಯಕ್ಷಿಕೆಗಳ ಮೂಲಕ ಮಕ್ಕಳನ್ನು ಚುಂಬಕದಂತೆ ಸೆಳೆಯಬೇಕು. ವಿಜ್ಞಾನದಲ್ಲಿ ಕುತೂಹಲವೇ ಬಹಳ ಮುಖ್ಯ. ಕುತೂಹಲ ಕೆರಳಿಸುವವನೇ ಪ್ರಭಾವಿ ಶಿಕ್ಷಕನಾಗುತ್ತಾರೆ. ಇದುವೇ ವೈಚಾರಿಕತೆಯ ಪ್ರಥಮ ಮೆಟ್ಟಿಲು ಎಂದು ತಿಳಿಸಿದರು.
ದುರ್ಘಟನೆ ಸೂಚಕವಲ್ಲ
ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯ ಆರ್.ಎಸ್. ಪಾಟೀಲ ಮಾತನಾಡಿ, ಘನೀಕೃತ ಧೂಳಿಕಣ ಹಾಗೂ ಆವಿಗಳಿಂದ ನಿರ್ಮಾಣಗೊಂಡ ಧೂಮಕೇತುಗಳು ಆಕಾಶದಲ್ಲಿ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುತ್ತವೆ. ಅವು ಸೂರ್ಯನ ಸಮೀಪ ಬಂದಾಗ ಆವೀಕರಣಕ್ಕೆ ಒಳಗಾಗಿ ಬಾಲ ಬೆಳೆಸಿಕೊಳ್ಳುತ್ತವೆ. ಹ್ಯಾಲಿಯಂತಹ ಧೂಮಕೇತುಗಳು ನಿಯಮಿತ ಅವಧಿಯಲ್ಲಿ ಭೂಮಿಯ ಕಕ್ಷೆಗೆ ಬರುತ್ತವೆ. ದುರ್ಘಟನೆಗಳಿಗೂ ಧೂಮಕೇತುಗಳ ದರ್ಶನಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಚಿಂತಿಸದೆ, ಅಪರೂಪದ ಅತಿಥಿಗಳಾದ ಧೂಮಕೇತುಗಳನ್ನು ನೋಡುವ, ಆನಂದಿಸುವ, ಮಾಹಿತಿ ಕಲೆ ಹಾಕುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಬಿ. ಮುದ್ದಿ ಹಾಗೂ ಜಿ.ಎಸ್. ಹತ್ತಿಮತ್ತೂರ, ಧೂಮಕೇತುಗಳ ಹುಟ್ಟು, ವಿಕಸನ, ರಚನೆ, ವೀಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಜಿಲ್ಲೆಯ 50ಕ್ಕೂ ಹೆಚ್ಚು ಪ್ರೌಢಶಾಲೆಗಳ ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಭಾಗವಹಿಸಿದ್ದರು. ಪ್ರೊ ಕೆ.ಸಿ. ಕುಲಕರ್ಣಿ ಮಾತನಾಡಿದರು. ಶಿವಲಿಂಗೇಶ್ವರ ವಿದ್ಯಾಪೀಠದ ಕಾರ್ಯಾಧ್ಯಕ್ಷ ಪಿ.ಡಿ. ಶಿರೂರ ಅಧ್ಯಕ್ಷತೆ ವಹಿಸಿದ್ದರು.
ಹುಕ್ಕೇರಿ ಮಠದ ಆಡಳಿತಾಧಿಕಾರಿ ಬಿ. ಬಸವರಾಜ, ಎಸ್.ಎನ್. ದೊಡ್ಡಗೌಡರ, ಸಾಹಿತಿ ಸತೀಶ ಕುಲಕರ್ಣಿ, ವಿಷಯ ಪರಿವೀಕ್ಷಕ ರಾಮಣ್ಣನವರ, ಕರಾವಿಪ ವಿಜ್ಞಾನ ಘಟಕದ ಕಾರ್ಯದರ್ಶಿ ಎ.ಎಚ್. ಕಬ್ಬಿಣಕಂತಿಮಠ ಇದ್ದರು. ಬಿಜೆವಿಎಸ್ ರಾಜ್ಯ ಘಟಕದ ಉಪಾಧ್ಯಕ್ಷೆ ರೇಣುಕಾ ಗುಡಿಮನಿ ಸ್ವಾಗತಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ. ಮಾಸಲವಾಡ ವಂದಿಸಿದರು.