ಚಿಕ್ಕೆರೂರು ರಸ್ತೆ ಅಗಲೀಕರಣಕ್ಕೆ ಕರವೇ ಆಗ್ರಹ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಡಿ. 16
ಚಿಕ್ಕೆರೂರು ಗ್ರಾಮದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ 62ರ ದುರಸ್ತಿ, ಅಗಲೀಕರಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶಾಸಕ ಯು.ಬಿ. ಬಣಕಾರಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಕರಿಬಸಯ್ಯ ಬಸರಿಹಳ್ಳಿಮಠ ಮಾತನಾಡಿ, ಹಿರೇಕೆರೂರು ತಾಲೂಕು ಕೇಂದ್ರದಿಂದ ಚಿಕ್ಕೆರೂರು ಮುಖಾಂತರ ಹಾವೇರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 62 ಕಿರಿದಾಗಿದ್ದು, ಚಿಕ್ಕೆರೂರು ಗ್ರಾಮದಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗುತ್ತಿದೆ. ಈ ರಸ್ತೆ ಕೇವಲ 10ರಿಂದ 12 ಅಡಿ ಅಗಲವಿದ್ದು, ಮನೆಗಳು, ಅಂಗಡಿ ಮೆಟ್ಟಿಲುಗಳು ರಸ್ತೆಗೆ ಅಡ್ಡಿಯಾಗಿವೆ. ಚಿಕ್ಕೆರೂರು ಕೇಂದ್ರ ಸ್ಥಳವಾಗಿದ್ದು, ಹಂಸಬಾವಿ ಹೋಬಳಿಯ ಕೆಲವು ಗ್ರಾಮಗಳು ಹಾಗೂ ಶಿವಮೊಗ್ಗ ಜಿಲ್ಲೆಯ 50 ಗ್ರಾಮಗಳ ಜನತೆಯೂ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಸಾಲದ್ದಕ್ಕೆ ರಸ್ತೆ ಮೇರೆ ದನ-ಕರುಗಳು, ಆಡು-ಮೇಕೆಗಳೂ ಸಂಚರಿಸುತ್ತಿರುತ್ತವೆ. ಇಲ್ಲಿ ವಾಹನ ನಿಲ್ಲಿಸಲೂ ಸ್ಥಳಾವಕಾಶವಿಲ್ಲ. ಹೀಗಾಗಿ, ರಸ್ತೆಯ ಮೇಲೆಯೇ ವಾಹನ ನಿಲ್ಲಿಸಬೇಕಾಗುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಕರವೇ ತಾಲೂಕು ಅಧ್ಯಕ್ಷ ಗಿರೀಶ ಬಾರ್ಕಿ, ಗ್ರಾಮ ಘಟಕದ ಅಧ್ಯಕ್ಷ ರಮೇಶ ದಂದೂರ, ಕಾರ್ಯಕರ್ತರಾದ ವಸಂತ ದಂದೂರ, ಸಂತೋಷ ಚಂಚಿ, ಇರ್ಫಾನ್ ಮಖಾಂದರ, ಶಿವರಾಜ ಹರಿಜನ, ಕರಬಸಪ್ಪ ಬಣಕಾರ, ಶಿವಪ್ಪ ಬಣಕಾರ, ಮೋಹನ ಮಿರಜಕರ, ಮಂಜು ಗಾಣಿಗೇರ, ರಶೀದ ಹಾವನೂರು, ದಾದಾಪೀರ ಗುಮ್ನಾಳ, ಗಣೇಶ ಕುರುಬರ, ಸತೀಶ ಇರಗಾರ, ವೆಂಕಣ್ಣ ಕಾರ್ಕಳ, ಸಂತೋಷ ಬಣಕಾರ ಇದ್ದರು.