ಶಿಥಿಲ ಟಿಸಿ ಬದಲಿಸಿ
ಬ್ಯಾಡಗಿ: ತಾಲೂಕಿನ ಕಳಗೊಂಡ ಗ್ರಾಮದಲ್ಲಿ ಕೆರೆ ಪಕ್ಕದ ಹೊಲವೊಂದರಲ್ಲಿನ ವಿದ್ಯುತ್ ಪರಿವರ್ತಕ (ಟಿಸಿ) ಶಿಥಿಲಾವಸ್ಥೆ ತಲುಪಿದ್ದು, ಯಾವುದೇ ಸಂದರ್ಭದಲ್ಲಿ ನೆಲ ಕಚ್ಚುವ ಸ್ಥಿತಿಯಲ್ಲಿದೆ.
ಗ್ರಾಮಸ್ಥರು ದೂರು ಸಲ್ಲಿಸಿದ್ದು, ಕೂಡಲೇ ದುರಸ್ತಿ ಮಾಡಿಸುವಂತೆ ಆಗ್ರಹಿಸಿದ್ದಾರೆ. ಈ ಪರಿವರ್ತಕವನ್ನು 30 ವರ್ಷಗಳ ಹಿಂದೆ ಅಳವಡಿಸಲಾಗಿದ್ದು, ಕಂಬಗಳು ಬೀಳುವ ಸ್ಥಿತಿಯಲ್ಲಿವೆ. ಪಕ್ಕದಲ್ಲೇ ಕೆರೆ ಇರುವುದರಿಂದ ಟಿಸಿ ಉರುಳಿದರೆ ಕೆರೆಗೇ ಬೀಳುತ್ತದೆ. ಇದಕ್ಕೆ ಹೊಂದಿಕೊಂಡು ಹತ್ತಿ ಬೀಜ ತಯಾರಿಕಾ ಘಟಕಗಳು ಹಾಗೂ ರೇಷ್ಮೆ ಕೇಂದ್ರವಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ನಿತ್ಯ ಜನ ಕೈಯಲ್ಲಿ ಜೀವ ಹಿಡಿದು ಈ ಕಂಬಗಳ ಬಳಿಯಿಂದ ಓಡಾಡುತ್ತಿದ್ದಾರೆ.
ಕಂಬಗಳನ್ನು ಬದಲಿಸಿ, ಟಿಸಿಯನ್ನು ವ್ಯವಸ್ಥಿತವಾಗಿ ಅಳವಡಿಸದಿದ್ದಲ್ಲಿ ಹೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರಾದ ಮಲ್ಲನಗೌಡ ಪಾಟೀಲ, ಶಂಭಣ್ಣ ಚಿಕ್ಕಣಜಿ, ಹನುಮಂತಗೌಡ, ರವಿಗೌಡ ಪಾಟೀಲ ಆರೋಪಿಸಿದ್ದಾರೆ.