ಖಾಸಗಿ ವಾಹನಗಳ ವಿರುದ್ಧ ಕ್ರಮ: ಎಚ್ಚರಿಕೆ
ರಾಣಿಬೆನ್ನೂರು: ಬಸ್ ನಿಲ್ದಾಣದ ಆವರಣದಲ್ಲೇ ಖಾಸಗಿ ವಾಹನಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವ ಬಗ್ಗೆ 'ಕನ್ನಡಪ್ರಭ' ಡಿ. 17ರಂದು ಪ್ರಕಟಿಸಿದ ವರದಿಯಿಂದ ಎಚ್ಚೆತ್ತ ಸಾರಿಗೆ ಸಂಸ್ಥೆ ಅಧಿಕಾರಿಗಳು, ಮಂಗಳವಾರ ನಗರಕ್ಕೆ ಭೇಟಿ ನೀಡಿ, ಖಾಸಗಿ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಬಸ್ ನಿಲ್ದಾಣದಿಂದ 500 ಮೀ.ಗೂ ಕಡಿಮೆ ಅಂತರದಲ್ಲಿ ಖಾಸಗಿ ವಾಹನಗಳ ಪ್ರವೇಶ ನಿಷೇಧವಿದೆ. ಆದರೂ ಪ್ರಯಾಣಿಕರನ್ನು ಎಗ್ಗಿಲ್ಲದೆ ಹತ್ತಿಸಿಕೊಂಡು ಸಾಗುತ್ತಿರುವುದರಿಂದ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿತ್ತು. ಸಂಚಾರಕ್ಕೂ ಸಮಸ್ಯೆಯಾಗುತ್ತಿತ್ತು. ಹಾವೇರಿ ಜಿಲ್ಲಾ ಸಾರಿಗೆ ನಿಯಂತ್ರಕ ಶಾಂತಪ್ಪ ಗೊಟಕಿಂಡಿ, ರಾಣಿಬೆನ್ನೂರು ಡಿಪೋ ವ್ಯವಸ್ಥಾಪಕ ಸಂದೀಪ ದೊಡ್ಮನಿ, ಸಹಾಯಕ ನಿಲ್ದಾಣಾಧಿಕಾರಿ ಹೊನ್ನಪ್ಪ, ಖಾಸಗಿ ವಾಹನಗಳ ಚಾಲಕರು, ಮಾಲೀಕರಿಗೆ ಎಚ್ಚರಿಕೆ ನೀಡಿದರು. ನಿಲ್ದಾಣದ ಪಕ್ಕದಲ್ಲಿ ಪ್ರಯಾಣಿಕರನ್ನು ಕರೆದು ಹತ್ತಿಸಿಕೊಂಡಿದ್ದು ಪತ್ತೆಯಾದಲ್ಲಿ ಪೊಲೀಸರಿಗೆ ದೂರು ನೀಡಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಇಂದು, ನಾಳೆ ವಿದ್ಯುತ್ತಿಲ್ಲ
ಬ್ಯಾಡಗಿ: 110 ಕೆ.ವಿ.ಎ. ವಿದ್ಯುತ್ ಉಪಕೇಂದ್ರಗಳಲ್ಲಿ ದುರಸ್ತಿ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಡಿ. 18 ಹಾಗೂ 19ರಂದು 2 ದಿನಗಳ ಕಾಲ ಬೆಳಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಡಿ. 18ರಂದು ಮೊಟೇಬೆನ್ನೂರು, ಕಲ್ಲೆದೇವರು, ಗುಂಡೇನಹಳ್ಳಿ, ಬ್ಯಾಡಗಿ ಮಾಸಣಗಿ ವ್ಯಾಪ್ತಿಯ ಸ್ಥಳಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಡಿ. 19ರಂದು ಛತ್ರ, ಕದರಮಂಡಲಗಿ, ಮಲ್ಲೂರು, ಬನ್ನಿಹಟ್ಟಿ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಅಂಬಿಗರ ಚೌಡಯ್ಯ ಜಯಂತಿ: ನಾಳೆ ಸಭೆ
ಹಾವೇರಿ: ಜ. 21ರಂದು ನಿಜಶರಣ ಅಂಬಿಗೇರ ಚೌಡಯ್ಯನವರ ರಾಜ್ಯ ಮಟ್ಟದ ಜಯಂತ್ಯುತ್ಸವ ಮತ್ತು ಜ. 29ರಂದು ಪೀಠಾರೋಹಣದ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮ ಸಂಘಟಿಸುವ ಕುರಿತು ಜಿಲ್ಲಾ ನಿಜಶರಣ ಅಂಬಿಗೇರ ಚೌಡಯ್ಯನವರ ಗಂಗಾಮತಸ್ಥರ ಸಂಘ ಡಿ. 19ರಂದು ಮಧ್ಯಾಹ್ನ 2 ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಶಿವಣ್ಣನವರ ತಿಳಿಸಿದ್ದಾರೆ.
ಸಂಗಪ್ಪ ವರಮೂರ್ತಿ ನಿಧನ
ರಾಣಿಬೆನ್ನೂರು: ದೊಡ್ಡಪೇಟೆ ಪಟ್ಟಣಶೆಟ್ಟಿಯವರ ಓಣಿ ನಿವಾಸಿ ಸಂಗಪ್ಪ ಸಿದ್ದರಾಮಪ್ಪ ವರಮೂರ್ತಿ (55) ಮಣಿಪಾಲ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅಂತ್ಯಕ್ರಿಯೆ ಡಿ. 18ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ದೇವರಗುಡ್ಡ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ. ಇಬ್ಬರು ಪುತ್ರಿಯರು, ಓರ್ವ ಪುತ್ರ, ಇಬ್ಬರು ಸಹೋದರರು ಇದ್ದಾರೆ.