ನಿಯಮ ಪ್ರಕಾರವೇ ಅಗಲೀಕರಣ ಮಾಡಿ
ಬ್ಯಾಡಗಿ: ರಾಜ್ಯ ಹೆದ್ದಾರಿ ನಿಯಮಾವಳಿ ಪ್ರಕಾರವೇ ಮುಖ್ಯರಸ್ತೆಯ ಅತಿಕ್ರಮಣ ತೆರವುಗೊಳಿಸಿ ಅಗಲೀಕರಣ ಮಾಡುವಂತೆ ಆಗ್ರಹಿಸಿ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ಮಂಗಳವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಮುಖ್ಯರಸ್ತೆ ಅತಿಕ್ರಮಣ ತೆರವುಗೊಳಿಸಿ ಅಗಲೀಕರಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಕ್ರಮ. ಬ್ಯಾಡಗಿ ಪಟ್ಟಣ ಹಾಗೂ ಈ ಭಾಗದ ಬಹುತೇಕ ಜನರ ನಾಡಿಮಿಡಿತವೂ ಅದೇ ಆಗಿದೆ. ಆದರೆ ತಾಲೂಕಾಡಳಿತ ಕೇವಲ ಮುಖ್ಯರಸ್ತೆಯ ವ್ಯಾಪಾರಸ್ಥರ ಸಭೆಯನ್ನು ಕರೆದಿರುವುದು ಸರಿಯಲ್ಲ. ಪತ್ರಕರ್ತರು ಹಾಗೂ ಸಾರ್ವಜನಿಕರಿಗೆ ಮುನ್ಸೂಚನೆ ನೀಡದೆ ಗುಪ್ತವಾಗಿ ಸಭೆ ನಡೆಸಿರುವುದೇಕೆ ಎಂದು ಪ್ರಶ್ನಿಸಿದರು.
ಜನಾಭಿಪ್ರಾಯಕ್ಕೆ ಮನ್ನಣೆ ಇರಲಿ
ಮುಖ್ಯರಸ್ತೆ ಅಗಲೀಕರಣದ ವಿಷಯದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕ, ಮ್ಯಾಕ್ಸಿಕ್ಯಾಬ್ ಮಾಲೀಕರು ಹಾಗೂ ಆಟೋ ಚಾಲಕರ ಸಂಘ, ಎಸ್‌ಎಫ್‌ಐ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಹಾಗೂ ನಾರಾಯಣ ಗೌಡ ಬಣ) ಮುಂತಾದ ಸಂಘ ಸಂಸ್ಥೆಗಳು, ಅಸಂಘಟಿತ ಸಾವಿರಾರು ಜನರ ಸಮೂಹವೇ ಹೋರಾಟಕ್ಕೆ ಕೈಜೋಡಿಸಿವೆ. ಹೀಗಾಗಿ ತಾಲೂಕಾಡಳಿತ ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡುವಂತೆ ಆಗ್ರಹಿಸಿದರು.
ತೆರವಿಗೆ ಹಿಂಜರಿಕೆ ಬೇಡ
ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136ರ ಒಟ್ಟು ಅಗಲ 126 ಅಡಿಯಿದ್ದು ಪಟ್ಟಣದ ವ್ಯಾಪ್ತಿಯಲ್ಲಿ 80 ಅಡಿಯಿದೆ. ಯಾರದೋ ಸ್ವಂತ ಆಸ್ತಿಯನ್ನು ಸ್ವಾಧೀನಪಡಿಸಿ ಮುಖ್ಯರಸ್ತೆ ಅಗಲೀಕರಣ ಮಾಡುವ ಉದ್ದೇಶ ಸರ್ಕಾರ ಅಥವಾ ಹೋರಾಟಗಾರರಿಗೆ ಇಲ್ಲ. ಈ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳಬಾರದು. ನಿಯಮ ಪ್ರಕಾರವೇ ಮಾಡಬೇಕೆಂದರು.
ಪಟ್ಟಭದ್ರರ ಒತ್ತಡಕ್ಕೆ ಮಣಿಯದಿರಿ
ಶಂಕರ ಒಳಗುಂದಿ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಸೋಮವಾರ ಜರುಗಿದ ವ್ಯಾಪಾರಸ್ಥರ ಸಭೆಯಲ್ಲಿ ಮುಖ್ಯರಸ್ತೆ ಅಗಲಕ್ಕೆ ಸಂಬಂಧಿಸಿದಂತೆ ಒಮ್ಮತ ಮೂಡದೇ ಇರುವುದು ಖೇದದ ಸಂಗತಿ. ಮುಖ್ಯರಸ್ತೆಯಲ್ಲಿ ಶೇ. 60ರಷ್ಟು ವಾಣಿಜ್ಯ ಮಳಿಗೆಗಳಿದ್ದು, ಶೇ. 40ರಷ್ಟು ವಾಸದ ಮನೆಗಳಿವೆ. ಪಟ್ಟಭದ್ರರ ಒತ್ತಡಕ್ಕೆ ಮಣಿದು ಕೆಲವರು ಅಗಲೀಕರಣ ವಿರೋಧಿಸುತ್ತಿದ್ದಾರೆ ಎಂದರು.
ರವಿ ಹುಣಸೀಮರದ ಮಾತನಾಡಿ, ಮೋಟೆಬೆನ್ನೂರು ಮಾರ್ಗವಾಗಿ ಕೆಸಿಸಿ ಬ್ಯಾಂಕ್ ತಿರುವಿನ ವರೆಗೂ ಹಾಗೂ ಹಂಸಭಾವಿ ಮಾರ್ಗದಲ್ಲಿ ಹೆಸ್ಕಾಂ ಕಚೇರಿ ವರೆಗೂ ಹೆದ್ದಾರಿ 66 ಅಡಿಯಷ್ಟು ಅಗಲವಿದೆ. ಪಟ್ಟಣದ ಪರಿಮಿತಿಯಲ್ಲೂ ಹೆದ್ದಾರಿ ಇಷ್ಟೇ ಅಳತೆಯಲ್ಲಿ ಅಗಲೀಕರಣ ಆಗಲಿ ಎಂದು ಆಗ್ರಹಿಸಿದರು. ಸದರಿ ಹೆದ್ದಾರಿ ಹಿರೇಕೆರೂರು ಮುಖ್ಯರಸ್ತೆ ಮೂಲಕ ಹಾದು ಹೋಗಿದ್ದು, ಅಲ್ಲಿ ಈಗಾಗಲೇ ಅತಿಕ್ರಮಣ ತೆರವುಗೊಳಿಸಿ 80 ಅಡಿ ಅಗಲದ ಮುಖ್ಯರಸ್ತೆ ನಿರ್ಮಿಸಿದ್ದಾರೆ. ಬ್ಯಾಡಗಿ ತಾಲೂಕು ಆಡಳಿತವೂ ಇಂಥ ದಿಟ್ಟ ಕ್ರಮಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು.