ರೇಣುಕಾಚಾರ್ಯ ಸೊಸೈಟಿ ಬಂಡವಾಳ ರು. 6.46 ಕೋಟಿ
ಶಿಗ್ಗಾಂವಿ: ಶಿಗ್ಗಾಂವಿ ನಗರದ ಹಿರಿಯ ಸಹಕಾರಿಗಳ ಆಶಯ ಹಾಗೂ ಅವಿರತ ಶ್ರಮದ ಫಲವಾಗಿ 1995ರಲ್ಲಿ ಜಗದ್ಗುರು ರೇಣುಕಾಚಾರ್ಯ ಕೋ ಆಪ್ ಕ್ರೆಡಿಟ್ ಸೊಸೈಟಿ ಕೇವಲ 485 ಸದಸ್ಯರು ಹಾಗೂ ರು. 5.07 ಲಕ್ಷ ಬಂಡವಾಳಲ್ಲಿ ಪ್ರಾರಂಭಿಸಿದ್ದು, ಈಗ 2125 ಸದಸ್ಯರನ್ನು ಹೊಂದಿದ್ದು, ರು. 6.46 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ ಎಂದು ಅಧ್ಯಕ್ಷ ಬಿ.ಎಸ್. ನವಲಗುಂದ ಹೇಳಿದರು.
ನಗರದ ಜಗದ್ಗುರು ರೇಣುಕಾಚಾರ್ಯ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಭಾಂಶವನ್ನು ಕಟ್ಟಡ ನಿಧಿಗೆ ದೇಣಿಗೆ ನೀಡಿದ್ದು ಸದಸ್ಯರಿಗೆ ಸಂಸ್ಥೆಯ ಮೇಲಿನ ಅಭಿಮಾನ ಮತ್ತು ಪ್ರೀತಿಯನ್ನು ಎತ್ತಿ ತೋರಿಸುವಂತಾಗಿದೆ. ತನ್ನ 19ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಜನರ ಉಳಿತಾಯ ಮನೋಭಾವಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಠೇವು ಸಂಗ್ರಹಣಾ ಮಾಸವನ್ನು ಆಚರಿಸುತ್ತಿದೆ ಎಂದು ಅಧ್ಯಕ್ಷ ಬಿ.ಎಸ್.ನವಲಗುಂದ ಹೇಳಿದರು.
ಇದು ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರಸ್ಥರಿಗೆ ಅಲ್ಪಾವಧಿ, ಮಧ್ಯಮಾವಧಿ ಸಾಲ ಜೊತೆಗೆ ಬಂಗಾರ ಆಭರಣಗಳಮೇಲೆ ಸಾಲ ನೀಡುತ್ತಿದ್ದು, ಸಂಘ 18 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸಹಕಾರ ಸಂಘಗಳು ಸಮಾಜದ ಸ್ವಾಸ್ಥ್ಯ ಹಾಗೂ ಆರ್ಥಿಕ ಸಬಲೀಕರಣದ ಹರಿಕಾರ ಎಂಬ ಮಾತನ್ನು ಸೊಸೈಟಿ ನಿಜವಾಗಿಸಿದೆ ಎಂದರು.
ಸಂಸ್ಥೆಯು ತನ್ನ ಇವತ್ತಿನ ಅಂದಾಜು ರು. 1 ಕೋಟಿ ಮೌಲ್ಯದ ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಇದಕ್ಕೆ ಸಂಸ್ಥೆಯ ಸರ್ವ ಸದಸ್ಯರು ಸರ್ವಾನುಮತದಿಂದ ತಮಗೆ ಬರಬೇಕಾದ ಪ್ರತಿ ವರ್ಷದ ಲಾಭಾಂಶವನ್ನು ಕಟ್ಟಡನಿಧಿಗೆ ದೇಣಿಗೆ ನೀಡಿದ್ದು ಸದಸ್ಯರಿಗೆ ಸಂಸ್ಥೆಯ ಮೇಲಿನ ಅಭಿಮಾನ ಮತ್ತು ಪ್ರೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಸಂಘವು ಸಂಕಲ್ಪ ನಿಧಿ ಎಂಬ ಠೇವು ಪ್ರಾರಂಭಿಸಿದ್ದು, ಈ ಯೋಜನೆಯ ಠೇವುದಾರರಿಗೆ ಅಪಘಾತ ವಿಮೆಯ ಸೌಲಭ್ಯವನ್ನೂ ಸಹ ಒದಗಿಸುತ್ತಿದೆ. ಸಂಘವು ಠೇವುದಾರರ ಅಗತ್ಯಗಳ ಪೂರೈಕೆಯ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕಿನ ಮಾನದಂಡಗಳಾದ ಪ್ರವಾಹಿ ಮತ್ತು ಮೀಸಲು ಧನ, ಅನುತ್ಪಾದಕ ಆಸ್ತಿ ನಿಧಿಗಳನ್ನು ಅಳವಡಿಸಿಕೊಂಡಿದ್ದು, ಠೇವುದಾರರ ಭರವಸೆಯ ಸಹಕಾರಿ ಸಂಘವಾಗಿದೆ. ಸಂಘದಲ್ಲಿ ಸ್ವಾಭಾವಿಕ, ಅಪಘಾತದಲ್ಲಿ ಮೃತರಾದ ಸದಸ್ಯರ ಕುಟುಂಬಕ್ಕೆ ಸದಸ್ಯರ ಮರಣೋತ್ತರ ನಿಧಿ, ಸದಸ್ಯರ ಅಪಘಾತ ಪರಿಹಾರ ನಿಧಿಯಿಂದ ಪರಿಹಾರ ಕೊಡುವ ಪರಿಪಾಠವಿದೆ ಎಂದು ವಿವರಿಸಿದರು. ಮಾಜಿ ಅಧ್ಯಕ್ಷ ಡಾ. ಆರ್.ಎಸ್.ಅರಳೆಲೆಮಠ, ಡಾ. ಎ.ಪಿ.ಕೆ.ಪಾಟೀಲ, ಸೊಸೈಟಿ ವ್ಯವಸ್ಥಾಪಕ ಡಿ.ಎಂ.ಕುಂದಾಪುರ ಇದ್ದರು.