ಸ್ತ್ರೀಯರ ಶೋಷಣೆ ವಿಷಾದಕರ ಸಂಗತಿ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 18
ವೇದಕಾಲದಿಂದ ಹೆಣ್ಣನ್ನು ಗೌರವ ಹಾಗೂ ಪೂಜ್ಯ ಭಾವನೆಯಿಂದ ನೋಡಲಾಗುತ್ತಿದೆ. ಹೆಣ್ಣನ್ನು ಪೂಜಿಸುವ ನಾಡಿನಲ್ಲಿ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿರುವುದು ವಿಷಾದಕರ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್. ಸಾವಿತ್ರಿ ವಿನಾಯಕ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯಿದೆ 2005 ನಿಯಮ 2006ರಡಿ ಜಿಲ್ಲಾ ಮಟ್ಟದ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾರತಮ್ಯ: ಮಹಿಳೆ ಅಬಲೆಯಲ್ಲ ಸಬಲೆಯೆಂದು ಹೇಳಲಾಗುತ್ತಿದೆ. ಆದರೂ, ಪುರುಷ ಪ್ರಧಾನ ಸಮಾಜದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅನೇಕ ಕಡೆಗಳಲ್ಲಿ ನಾವು ಇಂದಿಗೂ ಪುರುಷ ಹಾಗೂ ಮಹಿಳೆಯ ಮಧ್ಯೆ ತಾರತಮ್ಯ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಪಿತ್ರಾರ್ಜಿತ ಆಸ್ತಿ ಹಕ್ಕು ಜಾರಿಗೆ ಬಂದಾಗಿನಿಂದ ಮಹಿಳೆಗೆ ಇನ್ನೊಂದು ಹಿಂಸೆ ಶುರುವಾಗಿದೆ. ಆಸ್ತಿ ತರುವವರೆಗೆ ಗಂಡನ ಮನೆಗೆ ಸೇರಿಸಿಕೊಳ್ಳದ ಅನೇಕ ಪ್ರಕರಣಗಳನ್ನು ನಾವಿಂದು ನೋಡುತ್ತಿದ್ದೇವೆ. ಇದು ಕಳವಳಕಾರಿ ಸಂಗತಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಸಮಸ್ಯೆಗಳನ್ನು ಎದುರಿಸಲು ಕಾನೂನು ಸಹಾಯಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಹಾಗೂ ವರದಕ್ಷಿಣೆ ಕಿರುಕುಳ ಕುರಿತು ದೂರು ನೀಡಲು ಠಾಣೆ ಆಗಮಿಸಿದ ಸಂದರ್ಭದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರಿಗೆ ನ್ಯಾಯ ಸಿಗದೆ ಇರಬಹುದು. ಆದರೆ ಮಹಿಳೆಯರ ಸಂರಕ್ಷಣಾ ಕಾಯ್ದೆ 2005ರ ನಿಯಮದ ಅನ್ವಯ ದೂರು ದಾಖಲಿಸಿ, ನ್ಯಾಯ ಪಡೆಯಬಹುದು. ಪ್ರಜ್ಞಾವಂತ ಸಮಾಜದಲ್ಲಿ ಎನ್‌ಜಿಓ, ಸ್ವ-ಸಹಾಯ ಸಂಘಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆ ಸಹಯೋಗದಲ್ಲಿ ಸಮಾಜದ ಕಟ್ಟಕಡೆಯ ಮಹಿಳೆಗೂ ಈ ಕಾಯ್ದೆ ತಲುಪಿಸಬೇಕಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಮಾತನಾಡಿ, ಕೌಟುಂಬಿಕ ಸಂಬಂಧದಲ್ಲಿನ ಯಾವುದೇ ಪುರುಷ ಹಿಂಸೆ ನೀಡಿದರೂ ಅವರ ವಿರುದ್ಧ ದೂರು ದಾಖಲಿಸಬಹುದು ಎಂದರು.
ನ್ಯಾಯವಾದಿಗಳಾದ ಚೇತನಾ ಜಿ.ಎಸ್. ಹಾಗೂ ರಿಹಾನಾ ಚನ್ನಪಟ್ಟಣ ಉಪನ್ಯಾಸ ನೀಡಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಗೀತಾ ಪೂಜಾರ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಸ್. ಹಿರೇತನದ ಇತರರು ಇದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಮಾಳಗಿ ಸ್ವಾಗತಿಸಿದರು. ಅನ್ನಪೂರ್ಣ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ನಿರೂಪಣಾಧಿಕಾರಿ ಕೆ.ಎಚ್. ವಿಜಯಕುಮಾರ ವಂದಿಸಿದರು.