ವೃತ್ತಿ ಶಿಕ್ಷಣ ಕಾಯ್ದೆ ಬೇಡ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 19
ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ಕಾಯ್ದೆ ಹೆಸರಿನಲ್ಲಿ ಇಡೀ ವೃತ್ತಿ ಶಿಕ್ಷಣವನ್ನು ಸರ್ಕಾರ ಮಾರಾಟದ ಸರಕನ್ನಾಗಿಸಲು ಹೊರಟಿದ್ದು, ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸರ್ಕಾರದ ಪ್ರತಿಕೃತಿ ದಹಿಸಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿ, ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು. ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನಸು ಭಗ್ನ: ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, ಕಾಯ್ದೆ ಜಾರಿ ಮಾಡುವ ಮೂಲಕ ರಾಜ್ಯ ಸರ್ಕಾರ ವೃತ್ತಿ ಶಿಕ್ಷಣ ಕನಸು ಹೊತ್ತ ವಿದ್ಯಾರ್ಥಿಗಳ ಕನಸಿಗೆ ಭಂಗ ತರುತ್ತಿದೆ. ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸ್ಗಳಿಗೆ ಶುಲ್ಕವನ್ನು ಹೆಚ್ಚಿಸುವ ಜತೆಗೆ ಖಾಸಗಿ ಕಾಲೇಜುಗಳಿಗೆ ಸಿಇಟಿ ಮೂಲಕ ಪ್ರವೇಶ ಪ್ರಕ್ರಿಯೆ ಕೈಬಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನೀತಿಯಿಂದಾಗಿ ಲಕ್ಷಾಂತರ ದಲಿತ-ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.
ಸರ್ಕಾರ ಜಾರಿಗೆ ತರುತ್ತಿರುವ ವೃತ್ತಿ ಶಿಕ್ಷಣ ಕಾಯ್ದೆ ಹಿಂದಕ್ಕೆ ಪಡೆಯಬೇಕು. ಶುಲ್ಕ ಏರಿಕೆ ಕೈಬಿಟ್ಟು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಬೇಕು. ಅಗತ್ಯ ಸೌಲಭ್ಯಗಳಿಲ್ಲದ, ಸಾಮಾಜಿಕ ನ್ಯಾಯ ಕಡೆಗಣಿಸುತ್ತಿರುವ ಹಾಗೂ ಸರ್ಕಾರದ ನಿಯಂತ್ರಣಕ್ಕೆ ಬಾರದ ಖಾಸಗಿ ಕಾಲೇಜುಗಳ ಮಾನ್ಯತೆ ರದ್ದು ಮಾಡಬೇಕು. ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡುವ ಬದಲು ಸರ್ಕಾರಿ ಕಾಲೇಜುಗಳನ್ನು ಪ್ರಾರಂಭಿಸಬೇಕು. ಈಗಿರುವ ಸರ್ಕಾರಿ ಕಾಲೇಜುಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ವಸೂಲಿಗೆ ಅವಕಾಶ: ಇದೇ ಶೈಕ್ಷಣಿಕ ವರ್ಷದಿಂದ ಈ ಕಾಯ್ದೆಯನ್ನು ಸರ್ಕಾರ ಜಾರಿ ಮಾಡಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದಾರೆ. ಕಾಯ್ದೆ ಪ್ರಕಾರ ಶುಲ್ಕ ನಿಗದಿ ಮತ್ತು ಪ್ರವೇಶಕ್ಕೆ ಸಂಬಂಧಿಸಿ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿ ಕಾಲೇಜಿನ ಮೂಲಭೂತ ಸೌಲಭ್ಯಗಳ ಆಧಾರದಲ್ಲಿ ಶುಲ್ಕವನ್ನು ನಿಗದಿ ಮಾಡುತ್ತದೆ. ರಾಜ್ಯದಲ್ಲಿ 10 ಸರ್ಕಾರಿ, 13 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. 9 ಡೀಮ್ಡ್ ವಿವಿಗಳಿವೆ. 12 ಸರ್ಕಾರಿ, 9 ಅನುದಾನಿತ, 177 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿವೆ. ರಾಜ್ಯದಲ್ಲಿ ಖಾಸಗಿ ಕಾಲೇಜುಗಳೇ ಹೆಚ್ಚಿರುವುದರಿಂದ ಈ ಕಾಯ್ದೆಯಿಂದಾಗಿ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳು ನಿಗದಿ ಪಡಿಸು ಶುಲ್ಕವನ್ನು ಭರಿಸಬೇಕಾಗುತ್ತದೆ. ಈ ಕಾಯ್ದೆ ಖಾಸಗಿ ಕಾಲೇಜುಗಳನ್ನು ನಿಯಂತ್ರಿಸುವ ಬದಲು ಹಣ ವಸೂಲಿಗೆ ಅವಕಾಶ ನೀಡುತ್ತಿದೆ. ಈಗಿರುವ ಸರ್ಕಾರಿ ಸಿಇಟಿ ಪ್ರವೇಶ ಪರೀಕ್ಷೆ ಒಂದಿಷ್ಟು ಬಡ-ದಲಿತ-ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಸರ್ಕಾರಿ ಸಿಇಟಿಯನ್ನು ರದ್ದು ಪಡಿಸಿರುವ ಈ ಕಾಯ್ದೆ ಖಾಸಗಿ ಕಾಲೇಜುಗಳಿಗೆ ಪರೀಕ್ಷೆ ಹೆಸರಲ್ಲಿ ಅನೇಕ ಅಕ್ರಮಗಳಿಗೆ ಅವಕಾಶ ಕಲ್ಪಿಸಲಿದೆ ಎಂದು ದೂರಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಹಾರ, ಇಮಾಮ್ ನದಾಫ್, ಪ್ರಸನ್ನ ಹಿರೇಮಠ, ಮಂಜುನಾಥ ಉಪ್ಪಾರ, ಮಹಮದ್ ರಫೀಕ್ ನದಾಫ್ ಇದ್ದರು.