ಸುದ್ದಿ ಸಂಕ್ಷೇಪ
ಕೋಳಿವಾಡಗೆ ಸಚಿವ ಸ್ಥಾನ ನೀಡಿ: ಮನವಿ
ರಾಣಿಬೆನ್ನೂರು: ಶಾಸಕ ಕೆ.ಬಿ. ಕೋಳಿವಾಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾಗಿ ತಾಲೂಕು ಗ್ರಾಮೀಣ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ, ಮಾಜಿ ಸೈನಿಕ ಕೃಷ್ಣಪ್ಪ ಬಾಬಣ್ಣ ಒಡ್ಡರ ತಿಳಿಸಿದ್ದಾರೆ. ಶಾಸಕ ಕೋಳಿವಾಡ ಅವರ ಪಕ್ಷನಿಷ್ಠೆ, ಹಿರಿತನ ಪರಿಗಣಿಸಿ ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡಬೇಕು ಎಂದು ಕೃಷ್ಣಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ರಮೇಶ ಹಲ್ಡಹಲ್ಡರ, ತಾಲೂಕು ಅಲ್ಪಸಂಖ್ಯಾತರ ಸಮಿತಿ ಅಧ್ಯಕ್ಷ ಇಕ್ಬಾಲ್ ಸಾಬ ರಾಣಿಬೆನ್ನೂರು, ಭೀಮಪ್ಪ ರಾಠೋಡ, ತಿಮ್ಮನಗೌಡ ಸಣ್ಣಗೌಡ್ರ, ರಂಗಪ್ಪ ರೆಡ್ಡಿ, ಹಾಲಪ್ಪ ಲಮಾಣಿ, ಮಾರುತಿ ಪೂಜಾರ, ಶಿವಾನಂದ ದೊಡ್ಮನಿ ಮನವಿಯಲ್ಲಿ ತಿಳಿಸಿದ್ದಾರೆ.
22ಕ್ಕೆ ಪ್ರವಚನ ಮಂಗಲ
ಹಾನಗಲ್ಲ: ಜಗಜ್ಯೋತಿ ಬಸವೇಶ್ವರರ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಕಂಚಿನ ಪುತ್ಥಳಿ ಅನಾವರಣ ಅಂಗವಾಗಿ ಶರಣರು ಹಾಗೂ ಕುಮಾರ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಆರಂಭಗೊಂಡಿದ್ದು, ಡಿ. 21ರಂದು ಸಾಣೆಹಳ್ಳಿ ಮಠದ ಡಾ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಧರ್ಮಸಂದೇಶ ನೀಡಲಿದ್ದಾರೆ. ಡಿ. 11ರಿಂದ ವಿರಕ್ತಮಠದ ಆವರಣದಲ್ಲಿ ಬೆಳಗಾವಿ ರಾಜೂರು ಮಠದ ಕುಮಾರ ದೇವರು ಪ್ರವಚನ ನೀಡುತ್ತಿದ್ದಾರೆ. ಡಿ. 22ರಂದು ಪ್ರವಚನ ಮಂಗಲ ಸಮಾರಂಭ ನಡೆಯಲಿದ್ದು, ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ, ಮಾಜಿ ಸಚಿವ ಸಿ.ಎಂ. ಉದಾಸಿ ಅಧ್ಯಕ್ಷತೆ ವಹಿಸುವರು. ಡಿ. 23ರಂದು ಪುತ್ಥಳಿ ಅನಾವರಣ ಸಮಾರಂಭ ನಡೆಯಲಿದೆ. ಡಿ. 23ರಿಂದ 27ರ ವರೆಗೆ ಪ್ರತಿನಿತ್ಯ ಸಂಜೆ ಕುಮಾರೇಶ್ವರ ಬಯಲು ರಂಗ ಮಂದಿರದಲ್ಲಿ ಸಂಗೀತ, ಸಾಹಿತ್ಯ, ರಂಗ ಪ್ರದರ್ಶನ ಆಯೋಜಿಸಲಾಗಿದೆ.
ಶಾಸ್ತ್ರೀಯ ಸಂಗೀತ: ದ್ವಿತೀಯ
ಹಾವೇರಿ: ನಗರದ ಹುಕ್ಕೇರಿಮಠ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಭಾಗವಹಿಸಿದ ಕಾಗಿನೆಲೆಯ ಕನಕದಾಸ ಪ್ರೌಢಶಾಲೆಯ ವಿದ್ಯಾರ್ಥಿನಿ ವಾಣಿಶ್ರೀ ಸವಣೂರ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಕನಕದಾಸ ಪ್ರೌಢಶಾಲೆಯ ಪ್ರಧಾನ ಗುರು ಎಂ. ಬಸವರಾಜಪ್ಪ, ಶಿಕ್ಷಕರು ಅಭಿನಂದಿಸಿದ್ದಾರೆ.
ಶಿವಪುತ್ರಪ್ಪ ನಿಧನ
ಶಿಗ್ಗಾಂವಿ: ಮಂತ್ರೋಡಿ ಗ್ರಾಮದ ರೈತ ಶಿವಪುತ್ರಪ್ಪ ಮಾರುತ್ತೆಪ್ಪ ಕಾರಡಗಿ (65) ಮಂಗಳವಾರ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು, ಮೊಮ್ಮಕ್ಕಳು ಇದ್ದಾರೆ. ಪುಟ್ಟರಾಜ ಗವಾಯಿ ಸಚೇತನ ಸೌಹಾರ್ದ ಸಹಕಾರಿ ನಿಯಮಿತ, ಬಂಕಾಪುರದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.