ಹಾವೇರಿ ತಾಲೂಕಿನ 1350 ರೈತರಿಗೆ ರು. 14 ಕೋಟಿ ಬೆಳೆವಿಮೆ ಪರಿಹಾರ
ಹಾವೇರಿ: ತಾಲೂಕಿನ ಅಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2011-12ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ಜರುಗಿತು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಪರಿಹಾರದ ಚೆಕ್ ವಿತರಿಸಿ, ಹಾವೇರಿ ತಾಲೂಕಿನ 33 ಸಹಕಾರ ಸಂಘಗಳ 1350 ಫಲಾನುಭವಿಗಳಿಗೆ ರು. 14 ಕೋಟಿ ಪರಿಹಾರ ಬಂದಿದ್ದು, ಅಗಡಿ ಗ್ರಾಮದ 2,680 ರೈತರಿಗೆ ರು. 1.87 ಕೋಟಿ ಬೆಳೆವಿಮೆ ಮಂಜೂರಾಗಿದೆ ಎಂದು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಆಡಳಿತ ಸದಸ್ಯರು ಹಾಗೂ ಗ್ರಾಮಸ್ಥರು ಕೊಟ್ರೇಶಪ್ಪ ಬಸೇಗಣ್ಣಿ ಅವರನ್ನು ಸನ್ಮಾನಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚನ್ನವೀರಪ್ಪ ಬಸೇಗಣ್ಣಿ, ಗ್ರಾಪಂ ಅಧ್ಯಕ್ಷ ಪುಟ್ಟಯ್ಯ ಮಾಗೋಡ, ಜಿಲ್ಲಾ ಯೂನಿಯನ್ ಮಾಜಿ ಅಧ್ಯಕ್ಷ ಶಂಭಣ್ಣ ಚ. ಬಸೇಗಣ್ಣಿ, ಪ್ರಗತಿಪರ ರೈತ ಶಿವಪುತ್ರ ಶಿವಣ್ಣನವರ, ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ, ಎಪಿಎಂಸಿ ಮಾಜಿ ಸದಸ್ಯ ಯಲ್ಲಪ್ಪ ಮ. ಮಣ್ಣೂರು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕರಿಯಪ್ಪ ಬಿ. ಉಚ್ಚಣ್ಣನವರ, ಎಪಿಎಂಸಿ ಸದಸ್ಯ ನಾಗರಾಜ ಕೆ. ಬಸೇಗಣ್ಣಿ, ಕೆಸಿಸಿ ಬ್ಯಾಂಕ್ ನಿರೀಕ್ಷಕ ಎಂ.ಬಿ. ಪೂಜಾರ, ಎಸ್.ಜೆ. ನದಾಫ್, ಎಸ್.ಎಂ. ರುದ್ರಪ್ಪ ಇದ್ದರು.
ಸಂಘದ ಸಿಇಒ ಎಂ.ಎಸ್. ಜವಳಿ ನಿರ್ವಹಿಸಿದರು. ಡಿ.ಜಿ. ಕುಲಕರ್ಣಿ ವಂದಿಸಿದರು.