ಇನ್ನಷ್ಟು ನಕಲಿ ವೈದ್ಯರ ಮೇಲೆ ದಾಳಿ
ಹಾವೇರಿ: ತಾಲೂಕಿನಲ್ಲಿ ಖಾಸಗಿಯಾಗಿ ನಕಲಿ ವೈದ್ಯ ವೃತ್ತಿ ಮಾಡುತ್ತಿದ್ದ ವೈದ್ಯರು ಹಾಗೂ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಅಂಥ ಕ್ಲಿನಿಕ್‌ಗಳನ್ನು ಬಂದ್ ಮಾಡಿಸಿದ್ದಾರೆ.
ನಗರದ ಹಳೆ ಅಂಚೆ ಕಚೇರಿ ಹತ್ತಿರ ಟಿ. ಕುಮಾರ ನಡೆಸುತ್ತಿದ್ದ ಮೂಲವ್ಯಾಧಿ ಕ್ಲಿನಿಕ್ ಮೇಲೆ ದಾಳಿ ಮಾಡಿದಾಗ ಅನೂಪ ಬಿಶ್ವಾಸ್ ಎಂಬ ವ್ಯಕ್ತಿ ಕ್ಲಿನಿಕ್ ನಡೆಸುತ್ತಿದ್ದ ಸಂಗತಿ ಗೊತ್ತಾಯಿತು. ವಿಚಾರಣೆ ಮಾಡಿ ದಾಖಲಾತಿಗಳನ್ನು ಪರಿಶೀಲಿಸದಾಗ ಅವರ ಬಳಿ ಯಾವುದೇ ವೈದ್ಯಕೀಯ ಪ್ರಮಾಣಪತ್ರ ಇರಲಿಲ್ಲ. ಇವರು ಕೋಲ್ಕತ್ತಾ ಮೂಲದವರಾಗಿದ್ದು, 3-4 ತಿಂಗಳಿಂದ ಕ್ಲಿನಿಕ್ ನಡೆಸುತ್ತಿದ್ದರು. ಕ್ಲಿನಿಕ್‌ನ್ನು ತಕ್ಷಣ ಮುಚ್ಚಿಸಿ, ಅವರಿಂದ ಇನ್ನು ಮುಂದೆ ಈ ವೃತ್ತಿ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಯಿತು. ತಪ್ಪಿದರೆ ಕಾನೂನು ರೀತಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಯಿತು.
ರೇಲ್ವೆ ನಿಲ್ದಾಣದ ಹತ್ತಿರವಿದ್ದ ದುರ್ಗಾ ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ, ವೈದ್ಯಕೀಯ ಪ್ರಮಾಣಪತ್ರವಿಲ್ಲದೆ ಬಿ. ನಾಗರಾಜ ಎಂಬುವರು ಚಿಕಿತ್ಸೆ ನೀಡುತ್ತಿರುವುದು ಬೆಳಕಿಗೆ ಬಂತು. ಮಕಾನಗಲ್ಲಿಯಲ್ಲಿರುವ ಕಿರಣ (ಸುನೀಲ) ಕ್ಲಿನಿಕಲ್ ಲ್ಯಾಬೋರೇಟರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಕೆಪಿಎಂಇ ಕಾಯ್ದೆ ಅಡಿಯಲ್ಲಿ ಪ್ರಮಾಣ ಪತ್ರ ಇಲ್ಲದಿರುವುದನ್ನು ಪತ್ತೆ ಮಾಡಿದರು. ಪ್ರಮಾಣ ಪತ್ರ ಪಡೆದ ಮೇಲಷ್ಟೇ ಪ್ರಯೋಗಾಲಯ ನಡೆಸಬೇಕೆಂದು ಆದೇಶಿಸಲಾಯಿತು. ಕೆಲವು ಬಿಎಎಂಎಸ್ ವೈದ್ಯರು ಅಲೋಪತಿ ಔಷಧಿಗಳನ್ನು ನೀಡುತ್ತಿರುವುದು ಕಂಡು ಬಂದಿತು.
ಗುತ್ತಲಕ್ಕೆ ಭೇಟಿ ನೀಡಿದಾಗ ಲಕ್ಷ್ಮಣ ಜಾಮದಾರ್, ವಿ. ಕಣವಿಮಠ, ಎಂ.ವಿ. ಪಾಸಳಕರ ಕ್ಲಿನಿಕ್ ಮುಚ್ಚಿ ಪರಾರಿಯಾಗಿದ್ದರು. ಅವರ ವಿರುದ್ಧ ನೋಟಿಸ್ ಜಾರಿ ಮಾಡುವುದಾಗಿ ತಾಲೂಕು ಆರೋಗ್ಯಾಧಿಕಾರಿ ಡಾ ಪ್ರಭಾಕರ ಎಸ್. ಕುಂದೂರ ತಿಳಿಸಿದ್ದಾರೆ. ದಾಳಿಯಲ್ಲಿ ರಂಗಣ್ಣ ರಾಠೋಡ, ಎಸ್.ಎಸ್. ಹಿರೇಮಠ, ಎಸ್.ಜಿ. ದೇಶಪಾಂಡೆ, ಆಯುಷ್ ವೈದ್ಯರ ಸಂಘದ ಅಧ್ಯಕ್ಷ ಶಿವಕುಮಾರ ದೊಡ್ಡಗೌಡರ, ಎಸ್.ಎಫ್. ಸಾಬಳದ, ರವಿ ಬಿ. ಜೈನ್, ಪೊಲೀಸ್ ಇಲಾಖೆಯ ಅಶೋಕ ಪಾಲ್ಗೊಂಡಿದ್ದರು.