ಮೌಢ್ಯ ತಡೆ ಕಾಯ್ದೆ ವಿರುದ್ಧ ಸಂಘಟಿತ ಹೋರಾಟ: ವಾಗೀಶ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಡಿ. 20
ಮೂಢನಂಬಿಕೆಗಳ ವಿರುದ್ಧ ಸರ್ಕಾರ ಕಾಯ್ದೆ ರಚಿಸಲು ಮುಂದಾಗಿದ್ದು ಸರಿಯಲ್ಲ. ಅದರ ತಡೆಗೆ ಒಗ್ಗಟ್ಟಿನ ಹೋರಾಟ ಅನಿವಾರ್ಯ ಎಂದು ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಾಗೀಶ ಪ್ರಸಾದ ಹೇಳಿದರು.
ಬಂಕಾಪುರ ಪಟ್ಟಣದ ಸುಂಕದಕೆರಿ ಹುಚ್ಚೇಶ್ವರ ಮಠದಲ್ಲಿ ಗುರುವಾರ ನಡೆದ 9ನೇ ವರ್ಷದ ಇಷ್ಟಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಮತ್ತು ಶ್ರೀಮದ್ ಭಗವದ್ಗೀತೆ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ ಆರ್.ಎಸ್. ಅರಳೆಲೆ ಹಿರೇಮಠ ಮಾತನಾಡಿ, ಧರ್ಮದ ದಾರಿಯಲ್ಲಿ ನಡೆಯಲು ಸಿದ್ಧಾಂತ ಶಿಖಾಮಣಿ ಗ್ರಂಥದ ಅಧ್ಯಯನ ಅಗತ್ಯ ಎಂದರು. ಹುಬ್ಬಳ್ಳಿ ಪಂಚಗ್ರಹ ಹಿರೇಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸದ್ಗುರುವಿನ ಉಪದೇಶಗಳಿಂದ ಮನುಕುಲದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ಎಂದರು. ಕಾಶಿಪೀಠದ ಜಗದ್ಗರು ಡಾ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಮುಕ್ತಿ ಮಾರ್ಗಕ್ಕಾಗಿ ಭಕ್ತಿ ದಾರಿ ಅವಶ್ಯ ಎಂದು ತಿಳಿಸಿದರು.
ಹೋತ್ನಹಳ್ಳಿ ಶಾಂತವೀರ ಮಠದ ಶಂಭುಲಿಂಗ ಸ್ವಾಮೀಜಿ, ಹಾವೇರಿ ಎಲ್‌ಐಸಿ ಅಧಿಕಾರಿ ವಿ.ಜಿ. ಹರ್ಲಾಪುರ, ಮುಂಬೈಯ ಉದ್ಯಮಿ ಆರ್.ಬಿ. ಹೆಬ್ಬಳ್ಳಿ, ಬಿ.ಟಿ. ವೀರೇಶ ಇದ್ದರು. ಪರಶುರಾಮ ನರೇಗಲ್ಲ ಸಂಗಡಿಗರು ಸಂಗೀತ ಸೇವೆ ನೀಡಿದರು. ಗಂಗೂಬಾಯಿ ದೇಸಾಯಿ ಸ್ವಾಗತಿಸಿದರು. ಸಿ.ಎನ್. ಶಿಗ್ಗಾಂವಿ ನಿರೂಪಿಸಿದರು. ಬಂಕಾನಾಥ ಮಹಿಳಾ ರುದ್ರ ಬಳಗದಿಂದ ರುದ್ರಪಠಣ ಜರುಗಿತು.