ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಂಕ್ಷಿಪ್ತ ಸುದ್ದಿ

Mainashree
Updated On : 21 Dec 2013, 11:23 am

ದ್ಯಾಮವ್ವ ದೇವಿ ಕಾರ್ತಿಕೋತ್ಸವ
ಹಾವೇರಿ: ದ್ಯಾಮವ್ವನ ಗುಡಿ ಓಣಿಯಲ್ಲಿರುವ ಗ್ರಾಮ ದೇವತೆ ದ್ಯಾಮವ್ವದೇವಿ ಕಾರ್ತಿಕೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾವಿರಾರು ಭಕ್ತರು ದೇವಿ ದರ್ಶನ ಪಡೆದರು. ದವಸ ಧಾನ್ಯ ನೀಡಿ ಕಾರ್ತಿಕೋತ್ಸವದಲ್ಲಿ ಭಾಗವಹಿಸಿದ್ದರು. ದೇವಿಯ ಕಾರ್ತಿಕೋತ್ಸವ,  ಮಹಾ ಮಂಗಳಾರತಿ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಅನ್ನ ಸಂತರ್ಪಣೆಯಲ್ಲಿ 5 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು ಎಂದು ದೇವಸ್ಥಾನ ಸೇವಾ ಸಮಿತಿ ಸಂಚಾಲಕ ಅಶೋಕ ಮುದುಗಲ್ ತಿಳಿಸಿದ್ದಾರೆ. ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಲ್ಲಿಕಾರ್ಜುನ ಸಾತೇನಹಳ್ಳಿ, ಗಿರೀಶ ಗುಮಕಾರ, ಜಯಪ್ಪ, ಸಿದ್ದಪ್ಪ ಬಾಗಣ್ಣನವರ, ರಾಜಶೇಖರ ಉಪ್ಪಿನ, ಶಿವಲಿಂಗಪ್ಪ ಕಲ್ಯಾಣಿ, ರಾಜು ಹೊಂಬರಡಿ, ಗಂಗಾಧರ ಹೂಗಾರ, ಪರಶುರಾಮ ಬೆಟಗೇರಿ ಇದ್ದರು.
ಜ. 11ರಂದು ವಾಲ್ಮೀಕಿ ನಾಯಕ ಸಮಾವೇಶ
ಹಾವೇರಿ: ಚಿತ್ರದುರ್ಗದಲ್ಲಿ ಜ. 11ರಂದು ನಡೆಯುವ ವಾಲ್ಮೀಕಿ-ನಾಯಕ ಜನಾಂಗದ ಐತಿಹಾಸಿಕ ರಾಜ್ಯ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದೆಂದು ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಸಮಾವೇಶದ ಅಂಗವಾಗಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜ ಸಂಘಟನೆಯೇ ಸಮಾವೇಶದ ಉದ್ದೇಶ. ಈ ಮೂಲಕ ಜನಾಂಗದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಾಧ್ಯ. ಹಾವೇರಿ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳ ಸಮಾಜ ಬಾಂಧವರು ಪಾಲ್ಗೊಳ್ಳಬೇಕು ಎಂದರು. ಮುಖಂಡರಾದ ಕೆ. ಮಂಜಣ್ಣ, ಟಿ. ಈಶ್ವರ, ಹೊನ್ನಪ್ಪ ಮಾಳಗಿ, ಎನ್.ಎಂ. ಈಟೇರ, ಸಣ್ಣತಮ್ಮಪ್ಪ ಬಾರ್ಕಿ, ಉಮೇಶ ಮಾಗಳ, ಬಸವರಾಜ ಹಾದಿಮನಿ, ಲವೇಶ ಕನವಳ್ಳಿ ಮಾತನಾಡಿದರು. ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೊನ್ನಪ್ಪ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಸದಸ್ಯ ಪರಶುರಾಮ ಮೈಲಾರಪ್ಪನವರ, ಸೋಮನಗೌಡ ಪಾಟೀಲ, ದೊಡ್ಡಲಿಂಗಣ್ಣನವರ, ಡಿ.ಎಂ. ಸಾಲಿ, ಅಶೋಕ ತಳವಾರ, ಶ್ರೀಧರ ದೊಡ್ಡಮನಿ, ಮಂಜುಳಾ ಕರಬಸಮ್ಮನವರ, ಬಸವರಾಜ ತಳವಾರ, ರಾಜು ಆನವಟ್ಟಿ ಇದ್ದರು.
ಹಲ್ಲೆ: ಎಸ್ಸೆಫ್‌ಐ ಪ್ರತಿಭಟನೆ
ಗಜೇಂದ್ರಗಡ: ಬಳ್ಳಾರಿ ಕೋಟೆ ಪ್ರದೇಶದಲ್ಲಿ ಯುವತಿ ಶ್ರೀಲಕ್ಷ್ಮೀ ಮೇಲೆ ಹಲ್ಲೆ ಮಾಡಿರುವ ಸಂಸದ ಸಣ್ಣ ಫಕೀರಪ್ಪನ ಪುತ್ರ, ಪತ್ನಿ ಮತ್ತು 13 ಸಹಚರರಿಗೆ ಉಗ್ರ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವಿದ್ಯಾರ್ಥಿನಿ ಉಪ ಸಮಿತಿ ಕಾರ್ಯಕರ್ತೆಯರು ಶುಕ್ರವಾರ ಮೆರವಣಿಗೆ ನಡೆಸಿ, ವಿಶೇಷ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ: ಉಪತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ಲಕ್ಷ್ಮೇಶ್ವರ:  ಕುಂದಗೋಳ ತಾಲೂಕಿನ ಸಂಶಿಯ ನಾಡ ಕಚೇರಿಯಲ್ಲಿ ಉಪತಹಸೀಲ್ದಾರ್‌ರಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ ಗುಡ್ಡಪ್ಪ ದಾಸಪ್ಪನವರ ಪಟ್ಟಣದ ಇಂದಿರಾನಗರದಲ್ಲಿ ವಾಸವಾಗಿದ್ದು, ಅವರ ಮನೆ, ಸಂಶಿಯ ನಾಡ ಕಚೇರಿ ಹಾಗೂ ಗುಡಗೇರಿಯ ಅವರ ಮಾವನ ಮನೆಯ ಮೇಲೆ ಶುಕ್ರವಾರ ಬೆಳಗ್ಗೆ ಏಕ ಕಾಲದಲ್ಲಿ ಧಾರವಾಡ ಹಾಗೂ ಗದಗ ಲೋಕಾಯುಕ್ತರು ದಾಳಿ ನಡೆಸಿ, ಲಕ್ಷಾಂತರ ಮೌಲ್ಯದ ಅಕ್ರಮ ಆಸ್ತಿ ಹಾಗೂ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಧಾರವಾಡ ಎಸ್‌ಪಿ. ಕೆ. ಪರಶುರಾಮ ಈ ಕುರಿತು ಮಾಹಿತಿ ನೀಡಿದರು.  ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಾಗಿ ನೌಕರಿಗೆ ಸೇರಿದ ಮಂಜುನಾಥ ಜಿ. ದಾಸಪ್ಪನವರ 20 ವರ್ಷಗಳಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಕಂದಾಯ ಇಲಾಖೆಯಲ್ಲಿ ಬಡ್ತಿ ಹೊಂದಿದ ಅವರು ಈಗ ಸಂಶಿ ನಾಡಕಚೇರಿಯಲ್ಲಿ ಉಪ ತಹಸೀಲ್ದಾರ್‌ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಟ್ಟಣದ ಇಂದಿರಾ ನಗರದಲ್ಲಿನ ಮನೆಯ ಮೇಲೆ ಶುಕ್ರವಾರ ಬೆಳಗಿನ ವೇಳೆಯಲ್ಲಿ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಮನೆಯಲ್ಲಿದ್ದ ನಗದು, ಬಂಗಾರ, ಬೆಳ್ಳಿ ಹಾಗೂ ವಿವಿಧ ಬ್ಯಾಂಕಿನ ಪಾಸ್ ಬುಕ್‌ಗಳು, ಅಕ್ರಮ ಆಸ್ತಿಯ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಕುಂದಗೋಳ ತಾಲೂಕಿನ ಸಂಶಿಯ ನಾಡ ಕಚೇರಿ ಹಾಗೂ ಗುಡಗೇರಿಯ ಮಾವನ ಮನೆಯ ಮೇಲೆ ದಾಳಿ ಸಂಜೆ ವೇಳೆಗೂ ಮುಂದುವರೆದಿದೆ. ದಾಳಿಯ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ, ಶಿವಳ್ಳಿ, ಕೆ.ಸಿ. ಅಸುಂಡಿ, ಪಿಎಸ್‌ಐ ಬಿದರಿ, ಹುಲ್ಲಣ್ಣವರ ಸಿಬ್ಬಂದಿ ನಾರಾಯಣ ಚೂರಿ, ಮೋಹನ ಕಂಗೂರಿ, ಡಿ.ವೈ. ಜಗತಾಪ, ಪ್ರದೀಪ ಕುದರಿ, ದೀಪಾಲಿ, ದ್ರಾಕ್ಷಾಯಣಿ ಬಳಿಗಾರ, ಹಂಚಿನಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement