ಸಾರಾಯಿ ನಿಷೇಧಕ್ಕಾಗಿ ಪ್ರತಿಭಟನೆ
ರೋಣ: ಗ್ರಾಮದಲ್ಲಿ ಅವ್ಯಾಹತವಾಗಿ ನಕಲಿ ಮತ್ತು ಅಕ್ರಮ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕುಡುಕರ ಹಾವಳಿ ಹೆಚ್ಚಾಗಿದ್ದು, ಯಾರಿಗೂ ನೆಮ್ಮದಿಯಿಲ್ಲದಂತಾಗಿದೆ. ಗ್ರಾಮವನ್ನು ಸಾರಾಯಿ ಮಾರಾಟ ಮುಕ್ತ ಗ್ರಾಮವನ್ನಾಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ಹುಲ್ಲೂರ ಗ್ರಾಪಂ ವ್ಯಾಪ್ತಿಯ ಸೋಮನಕಟ್ಟಿ ಗ್ರಾಮದ ಮಹಿಳೆಯರು ಶುಕ್ರವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಗ್ರಾಪಂ ಉಪಾಧ್ಯಕ್ಷ ಡಿ.ಜಿ. ಬರಡ್ಡಿ ಮಾತನಾಡಿ, ಸೋಮನಕಟ್ಟಿ ಗ್ರಾಮದಲ್ಲಿ 3-4 ಅಂಗಡಿಯಲ್ಲಿ ಅವ್ಯಾಹತವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ.
ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿರುವ ಕುರಿತು ಅನೇಕ ಬಾರಿ ಹೊಳೆಆಲೂರ ಪೊಲೀಸ್ ಠಾಣೆಗೆ ಲಿಖಿತ ಮತ್ತು ಮೌಖಿಕ ದೂರು ನೀಡಿದ್ದೇವೆ. ಆ ವೇಳೆ 2 ದಿನ ಕದ್ದು, ಮುಚ್ಚಿ ಮಾರುತ್ತಾರೆ. ಮತ್ತೆ ಹಳೆ ಚಾಳಿ ಮುಂದುವರಿಸುತ್ತಾರೆ. ಯಾರಾದರೂ ಪ್ರತಿಭಟಿಸಿದೆ ಅವರನ್ನೇ ಸೇಡಿನಿಂದ ಬಡಿಯುತ್ತಾರೆ. ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲು ಪೊಲೀಸರ ಸಂಪೂರ್ಣ ಸಹಕಾರವಿದೆ. ನಾವು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾತಿನ ಚಕಮಕಿ: ಗ್ರಾಮದಲ್ಲಿ ನಿತ್ಯ ಕುಡಿದು ಬಂದು ಪತ್ನಿ, ಮಕ್ಕಳನ್ನು ಬಡಿಯುವುದಲ್ಲದೇ ಮನೆಯಲ್ಲಿದ್ದ ದವಸ, ಧಾನ್ಯ, ಪಾತ್ರೆಗಳನ್ನು ಕೊಂಡೊಯ್ದು ಮಾರುತ್ತಾರೆ. ಗ್ರಾಮದಲ್ಲಿ ಸಾರಾಯಿ ಮಾರಾಟ ತಡೆಯುವಂತೆ ಪೊಲೀಸರಿಗೆ ಹೇಳಿದರೂ ಕೇಳುತ್ತಿಲ್ಲ. ಇದರಲ್ಲಿ ತಹಸೀಲ್ದಾರರೂ ಶಾಮೀಲಾಗಿದ್ದಾರೆ. ಅದಕ್ಕೆ ಅಕ್ರಮ ಸಾರಾಯಿ ಮಾರಾಟ ನಿಲ್ಲುತ್ತಿಲ್ಲ ಎಂಬ ಸಂಶಯ ಕಾಡುತ್ತಿದೆ ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ಮುಖಂಡ ಮೌನೇಶ ಹಾದಿಮನಿ ಆರೋಪಿಸುತ್ತಿದಂತೆ ತಹಸೀಲ್ದಾರ್ ಎ.ಜಿ. ಪಂಡಿತ ಅವರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ನಿಯಂತ್ರಿಸದಿದ್ದರೆ ಹೋರಾಟ: ಕೇವಲ ಸೋಮನಕಟ್ಟಿ ಗ್ರಾಮದಲ್ಲಿ ಮಾತ್ರ ಅಕ್ರಮವಾಗಿ ಸಾರಾಯಿ ಮಾರುತ್ತಿಲ್ಲ. ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ನಕಲಿ ಮತ್ತು ಅಕ್ರಮ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಸುಸಂಸ್ಕೃತರು, ಮಹಿಳೆಯರು ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ತಾಲೂಕಿನಲ್ಲಿನ ಹಳ್ಳಿಗಳ ಜನತೆಗೆ ನೆಮ್ಮದಿ ಜೀವನ ಸಾಗಿಸಲು ವ್ಯವಸ್ಥೆ ಕಲ್ಪಿಸಿ. ಆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ಆದೇಶ ಹೊರಡಿಸಿ. ಕೂಡಲೇ ಸೋಮನಕಟ್ಟಿ ಗ್ರಾಮವನ್ನು ಸಾರಾಯಿ ಮಾರಾಟ ಮುಕ್ತ ಗ್ರಾಮವನ್ನಾಗಿಸುವಲ್ಲಿ ಕ್ರಮಕ್ಕೆ ತಾಲೂಕು ಆಡಳಿತ ಮುಂದಾಗಬೇಕು. ಇಲ್ಲದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೋಣ ಮತಕ್ಷೇತ್ರದ ಬಿಜೆಪಿ ಎಸ್ಸಿ ಘಟಕದ ಯುವ ಅಧ್ಯಕ್ಷ ಮಲ್ಲು ಮಾದರ, ದ.ಸ.ಸ ಸದಸ್ಯ ಮುತ್ತಪ್ಪ ಜೋಗಣ್ಣವರ ಹಾಗೂ ಪ್ರತಿಭಟನಾಕಾರರು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಎ.ಜಿ. ಪಂಡಿತ ಮಾತನಾಡಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ವಿಚಾರಿಸಲಾಗುವುದು. ಅಕ್ರಮ ಮತ್ತು ನಕಲಿ ಸಾರಾಯಿ ಮಾರಾಟ ಮಾಡುವವರ ಮೇಲೆ ಯೋಗ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಬಸವ್ವ ಹೂಗಾರ, ಯಲ್ಲವ್ವ ಮಾದರ, ಬಸವ್ವ ಮಾದರ, ಸಂಗೀತಾ ಅಂಬಿಗಾರ, ರೇಣುಕಾ ಅಂಬಿಗಾರ, ನೀಲವ್ವ ಚಲವಾದಿ, ಶಾರವ್ವ ಬಾರಕೇರ, ರೇಣವ್ವ ಬಾರಕೇರಿ, ಬೀಬಿಜಾನ ಚಿಕ್ಕೊಪ್ಪ, ಮಲ್ಲಪ್ಪ ಮಾದರ ಮುಂತಾದವರು ಪಾಲ್ಗೊಂಡಿದ್ದರು.