ಸಾಲ ಪಾವತಿಸಿದರೂ ಸಿಗದ ಉತಾರ: ಜನತೆ ಪ್ರತಿಭಟನೆ
ಹಾವೇರಿ: ನಗರದ ಹೊಸನಗರದ ಆಶ್ರಯ ಯೋಜನೆ ಫಲಾನುಭವಿಗಳು ಸರ್ಕಾರಕ್ಕೆ ತುಂಬಬೇಕಾದ ಸಾಲವನ್ನು ಪೂರ್ಣ ತುಂಬಿದ್ದರೂ ಫಲಾನುಭವಿಗಳಿಗೆ ಉತಾರ ನೀಡಲು ನಿರ್ಲಕ್ಷ್ಯ ತೋರಿದ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ನಾಗರಿಕರು ಶುಕ್ರವಾರ ಧರಣಿ ನಡೆಸಿದರು.
ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಳ್ಳಲು ರಾಜೀವ ಗಾಂಧಿ ವಸತಿ ನಿಗಮ ನೀಡಿದ ಸಾಲವನ್ನು ಫಲಾನುಭವಿಗಳು ಪಾವತಿಸಿ ವರ್ಷಗಳೇ ಕಳೆಯುತ್ತಾ ಬಂದರೂ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿ ಉತಾರ ನೀಡದೆ ಸತಾಯಸುತ್ತಿರುವ ನಗರಸಭೆಯ ವರ್ತನೆಯನ್ನು ಖಂಡಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಐ.ಯು ಪಠಾಣ, ವಾರದೊಳಗೆ ಉತಾರ ಕೊಡಿಸುವ ಭರವಸೆ ನೀಡಿ, ಧರಣಿ ನಿರತರ ಮನವೊಲಿಸಿದರು. ನಗರಸಭೆ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಬಿಜೆಪಿ ಸದಸ್ಯ ಸುರೇಶ ದೊಡ್ಡಮನಿ ಇದ್ದರು. ಕುಶಾಲ ಪಠಾಣ, ಚಮನ್ಸಾಬ ನದಾಫ್, ವಿಷ್ಣು ಕಮ್ಮಾರ, ವಾಸಣ್ಣ ಮಡಿವಾಳರ, ಯಲ್ಲಪ್ಪ ಭರಡಿ, ಅಲ್ಲಾಹುದ್ದಿನ್ ಮೇಲ್ಮುರಿ, ನಿಂಗಪ್ಪ ದೇವಿಹೊಸೂರು, ಮಹ್ಮದಲಿ ಆದೋನಿ ಮತ್ತಿತರರು ಇದ್ದರು.