ಸುದ್ದಿ ಸಂಕ್ಷೇಪ
28ರಂದು ಸರ್ಕಾರಿನೌಕರರ ಕ್ರೀಡಾಕೂಟ
ಶಿಗ್ಗಾಂವಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ಸದಸ್ಯರಿಗಾಗಿ ಜ. 4 ಹಾಗೂ 5ರಂದು ನಡೆಯಬೇಕಿದ್ದ ಕ್ರೀಡಾಕೂಟವನ್ನು ಡಿ. 28 ಹಾಗೂ 29ರಂದು ನಡೆಸುತ್ತಿದೆ. ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳು ನಡೆಯಲಿದ್ದು, ನೌಕರರು ಸಹಕರಿಸಬೇಕಾಗಿ ಸಂಘದ ಅಧ್ಯಕ್ಷ ಸಿ.ಡಿ. ಯತ್ನಳ್ಳಿ, ಪ್ರಧಾನ ಕಾರ್ಯದರ್ಶಿ ಬಿ.ಬಿ. ಕಟ್ಟಿಮನಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಬಂಕಾಪುರ: ಸಿದ್ಧಾಂತ ಶಿಖಾಮಣಿ ಪ್ರವಚನ
ಶಿಗ್ಗಾಂವಿ: ಬಂಕಾಪುರ ಪಟ್ಟಣದ ಹುಚ್ಚೇಶ್ವರಮಠದಲ್ಲಿ ಕ್ಷೇತ್ರ ಕಾಶೀಪೀಠದ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ 9ನೇ ವರ್ಷದ ಇಷ್ಟಲಿಂಗ ಪೂಜೆ, ಭಗವದ್ಗೀತೆ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನ ಆರಂಭವಾಗಿದ್ದು, ಡಿ. 23ರಂದು ವಿವಿಧ ಕಾರ್ಯಕ್ರಮ ಜರುಗಲಿದೆ. ಡಿ. 19ರಿಂದ ಪ್ರತಿದಿನ ಸಂಜೆ 6 ಗಂಟೆಗೆ ವೀರಶೈವ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ ಪ್ರವಚನ, ಡಿ. 23ರಂದು ಅಯ್ಯಾಚಾರ ದೀಕ್ಷೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ, ರುದ್ರಾಣಿ ಬಳಗದವರಿಂದ ರುದ್ರಪಠಣ ಕಾರ್ಯಕ್ರಮಗಳು ಜರುಗಲಿದೆ. ಧರ್ಮಸಭೆ ಸಾನ್ನಿಧ್ಯವನ್ನು ಕಾಶೀಪೀಠದ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು ವಹಿಸುವರು.
ಸಿಎಂ ಭೇಟಿ ನಿಮಿತ್ತ ಪೂರ್ವಭಾವಿ ಸಭೆ
ಹಿರೇಕೆರೂರು: ತಾಲೂಕಿನ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ ನೆರವೇರಿಸಲು ಹಿರೇಕೆರೂರು ಪಟ್ಟಣಕ್ಕೆ 2014ರ ಜನವರಿ 4ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಲಿದ್ದು, ಪಕ್ಷದ ವತಿಯಿಂದ ಸನ್ಮಾನ ಸ್ವೀಕರಿಸಲಿದ್ದಾರೆ. ಈ ಕುರಿತು ಚರ್ಚಿಸುವ ಸಲುವಾಗಿ ಮಾಜಿ ಶಾಸಕ ಬಿ.ಸಿ. ಪಾಟೀಲ ಅಧ್ಯಕ್ಷತೆಯಲ್ಲಿ ಡಿ. 23ರಂದು ಪಕ್ಷದ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆ ಕರೆಯಲಾಗಿದೆ. ಕಾರಣ ಪಕ್ಷದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಪಂ ಸದಸ್ಯರು, ಪಪಂ ಅಧ್ಯಕ್ಷರು ಮತ್ತು ಸದಸ್ಯರು, ಎಲ್ಲ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸಲಹೆ, ಸೂಚನೆ ನೀಡುವಂತೆ ಹಿರೇಕೆರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಶಿವನಗೌಡ್ರ, ರಟ್ಟಿಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಜಂಟಿ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.
ಬಿಜೆಪಿಗೆ ಶಿವಬಸಪ್ಪ
ಹಾವೇರಿ: ಬಿಜೆಪಿ ನಗರ ಘಟಕದ ಉಪಾಧ್ಯಕ್ಷರನ್ನಾಗಿ ಶಿವಬಸಪ್ಪ ಹಲಗಲ್ಲಿ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ.ಎಸ್. ಅಂದಾನಿಗೌಡ್ರ ಈ ನೇಮಕ ಮಾಡಿದ್ದು, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದರ ಮೂಲಕ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.