ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೂ ಮೀಸಲಾತಿ
ಹಾವೇರಿ: ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೂ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ತಿಳಿಸಿದರು.
ಹಾನಗಲ್ಲ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಕಟ್ಟದ ಉದ್ಘಾಟನೆ ನೆರವೇರಿಸಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಅಹಿಂದ ಮಾಡಲು ಹೊರಟಿದ್ದಾರೆ ಎಂದು ಆರೋಪ ಮಾಡುತ್ತಾರೆ. ಆದರೆ ಅಹಿಂದದಲ್ಲಿ ಎಲ್ಲ ಜಾತಿ, ವರ್ಗದವರೂ ಬರುತ್ತಾರೆ. ಬ್ರಾಹ್ಮಣರಲ್ಲೂ ಅನೇಕರು ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಅವರಿಗೂ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಈ ಪ್ರಕ್ರಿಯೆ ಯಾವಾಗ ನಡೆಯಲಿದೆ ಎಂದು ಕೇಳಿದ ಪ್ರಶ್ನೆಗೆ, ಈಗಲೇ ವಿವರ ನೀಡಿದರೆ ಅದಕ್ಕೆ ಅಡ್ಡಿ-ಆತಂಕಗಳೇ ಹೆಚ್ಚಾಗಬಹುದು. ಆದರೆ ಆರ್ಥಿಕವಾಗಿ ಹಿಂದುಳಿದ ಯಾವ ವ್ಯಕ್ತಿಯೂ ಸೌಲಭ್ಯದಿಂದ ವಂಚಿತರಾಗಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಉತ್ತರಿಸಿದರು.
ಅಲೆಮಾರಿಗಳಿಗೆ ವಿದ್ಯಾಸಿರಿ
ಹಾಸ್ಟೆಲ್ಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಕ್ರಮ ಜರುಗಿಸಲಾಗುತ್ತಿದೆ. ಹಾಸ್ಟೆಲ್ ಅವ್ಯವಸ್ಥೆ, ಅನಧಿಕೃತ ವ್ಯಕ್ತಿಗಳು ಅಲ್ಲಿ ವಾಸಿಸುವುದನ್ನು ತಡೆಯಲು ಹಾಗೂ ಮೇಲ್ವಿಚಾರಕರ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ 'ವಿದ್ಯಾಸಿರಿ' ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಹಾಸ್ಟೆಲ್ ವಂಚಿತ 20 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 7 ಸಾವಿರ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳೂ ಈ ಯೋಜನೆ ವಿಸ್ತರಿಸಿ ಆದೇಶಿಸಲಾಗಿದೆ. ಅರ್ಹ ವಿದ್ಯಾರ್ಥಿಗೆ ತಿಂಗಳಿಗೆ ರು. 1500 ಸಹಾಯಧನ ನೀಡಲಾಗುವುದು ಎಂದರು.
ವಿವಿಧ ಇಲಾಖೆಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಉಳಿದಿವೆ. 371 ಜೆ ಕಲಂನಡಿ ಹೈಕ ಭಾಗಕ್ಕೆ ಮೀಸಲಾತಿ ನಿಗದಿಯಾದ ತಕ್ಷಣ ಈ ಹುದ್ದೆಗಳ ಭರ್ತಿಗೂ ಚಾಲನೆ ನೀಡಲಾಗುವುದು. ಪ್ರತಿ ಹೋಬಳಿಗೆ ಒಂದರಂತೆ ವಸತಿ ಶಾಲೆ ಆರಂಭಿಸಲಾಗುತ್ತಿದೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳಲ್ಲಿ ಪ್ರವೇಶ ನಿರಾಕರಿಸುವಂತಿಲ್ಲ. ನಿಗದಿಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಬಯಸಿದರೆ ಅಷ್ಟೇ ಸಂಖ್ಯೆಗೆ ಸರ್ಕಾರ ಮಂಜೂರಾತಿ ನೀಡಲಿದೆ ಎಂದು ಸಚಿವ ಆಂಜನೇಯ ತಿಳಿಸಿದರು.
ಶಾಸಕ ಮನೋಹರ ತಹಶೀಲ್ದಾರ ಇದ್ದರು.