ಗ್ರಾಮೀಣ ಠಾಣೆಗೆ ಒತ್ತಾಯಿಸಿ ಗೃಹ ಸಚಿವರಿಗೆ ಪತ್ರ
ಕುಷ್ಟಗಿ: ಅಭಿವೃದ್ಧಿ ಹಾಗೂ ಜನಸಂಖ್ಯೆಯೊಂದಿಗೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ತೆರೆಯಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸರ್ಕಾರವನ್ನು ಒತ್ತಾಯಿಸಿದೆ.
ತಾಲೂಕಿನ ಠಾಣಾ ವ್ಯಾಪ್ತಿಗೆ 164 ಗ್ರಾಮಗಳಿದ್ದು, ಅಲ್ಲದೆ ಪಟ್ಟಣದಲ್ಲಿ ಒಂದು ರಾಷ್ಟ್ರೀಯ ಹಾಗೂ ಮೂರು ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ. ಪಟ್ಟಣ 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಹೀಗಾಗಿ ಜನಸಂಖ್ಯೆ ಹಾಗೂ ಅಭಿವೃದ್ಧಿ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸಾಕಷ್ಟು ಬೆಳವಣಿಗೆ ಕಾಣುತ್ತಿರುವ ಪಟ್ಟಣದಲ್ಲಿ ಸಾರ್ವಜನಿಕರ ಸಂಚಾರ, ಅಪರಾಧ, ಅಕ್ರಮ ಚಟುವಟಿಕೆ ಹಾಗೂ ಸಾರ್ವಜನಿಕರ ಸಮಸ್ಯೆಗಳು ಸಾಕಷ್ಟು ಬೆಳಕಿಗೆ ಬರುತ್ತಿವೆ. ಇವುಗಳ ಇತ್ಯರ್ಥಕ್ಕೆ ಒಂದೇ ಪೊಲೀಸ್ ಠಾಣೆಯಿಂದ ಅಸಾಧ್ಯ. ಆದ್ದರಿಂದ ಇಲ್ಲಿನ ಠಾಣೆ ವಿಭಜಿಸಿ, ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆಗಳನ್ನಾಗಿ ಪ್ರತ್ಯೇಕ ಸ್ಥಾಪಿಸುವುದು ಅಗತ್ಯವಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಅಲ್ಲದೆ ಜನತೆ ನೆಮ್ಮದಿ ಹಾಗೂ ರಕ್ಷಣೆ ದೃಷ್ಟಿಯಿಂದ ಕೂಡಲೇ ಪಟ್ಟಣದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಮಂಜೂರುಗೊಳಿಸಬೇಕು ಎಂದು ದಸಂಸ ತಾಲೂಕು ಪ್ರಧಾನ ಸಂಚಾಲಕ ಹುಸೇನಪ್ಪ ಮುದೇನೂರು ರಾಜ್ಯ ಗೃಹ ಸಚಿವ ಕೆ.ಜೆ. ಜಾರ್ಜ್ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.