ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವೈದ್ಯರ ಕೊರತೆ ನೀಗಿಸಲು ಸರ್ಕಾರಕ್ಕೆ ಪತ್ರ: ಡಾ. ದಾನರಡ್ಡಿ

Mainashree
Updated On : 23 Dec 2013, 10:45 am

ಕನ್ನಡಪ್ರಭ ವಾರ್ತೆ, ಕುಷ್ಟಗಿ, ಡಿ. 22
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದ್ದು, ಸಾರ್ವಜನಿಕರ ಆರೋಗ್ಯ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಲಾಗುತ್ತಿಲ್ಲ. ವೈದ್ಯರ ಕೊರತೆ ನೀಗಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಬಿ. ದಾನರೆಡ್ಡಿ ಹೇಳಿದರು.
ಶನಿವಾರ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕು ಮಟ್ಟದ ಆರೋಗ್ಯ ಇಲಾಖೆ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದೆಲ್ಲೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸಮಸ್ಯೆ ಇದೆ. ಹೀಗಾಗಿ ವೈದ್ಯ ಸಿಬ್ಬಂದಿ ಕೊರತೆ ಪರಿಹಾರಕ್ಕಾಗಿಯೇ ಸರ್ಕಾರ ಮಟ್ಟದಲ್ಲಿ ಸಾಕಷ್ಟು ಚಿಂತನೆ ನಡೆದಿದೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ತಿಂಗಳಿಗೆ ರು. 70 ಸಾವಿರದಿಂದ ರು. 1 ಲಕ್ಷ ವೇತನ ನೀಡಲು ನಿರ್ಧರಿಸಲಾಗಿದೆ. ಈಗಲಾದರೂ ವೈದ್ಯರು ಬರುವ ಸಾಧ್ಯತೆ ಇದೆ ಎಂದರು.
ವೈದ್ಯರ ಹಿಂಜರಿಕೆ: ರಾಜ್ಯದ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ವೈದ್ಯ ಸಿಬ್ಬಂದಿಗೆ ಬೆದರಿಕೆ, ಹಲ್ಲೆ ಹಾಗೂ ಅವಮಾನಕರ ಘಟನೆಯಿಂದ ವೈದ್ಯರು ಸೇವೆಗೆ ನಿರಾಕರಿಸಲು ಪ್ರಮುಖ ಕಾರಣವಾಗಿದೆ. ಹೀಗಾಗಿ ಸಾರ್ವಜನಿಕರು ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಪ್ರೀತಿ-ಗೌರವದಿಂದ ವರ್ತಿಸಿದರೆ ವೈದ್ಯರು ಸೇವೆ ನೀಡಲು ಮುಂದಾಗುತ್ತಾರೆ ಎಂದರು.
ಅನುದಾನ ವಿಳಂಬ: ತಾಲೂಕು ಆಸ್ಪತ್ರೆಗಳಲ್ಲಿ ತಾಯಿಭಾಗ್ಯ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಜಿಲ್ಲೆಯ ಮೂರು ತಾಲೂಕುಗಳಿಗೂ ತಾಯಿಭಾಗ್ಯ ಅನುದಾನ ವಿಳಂಬದಿಂದ ಫಲಾನುಭವಿಗಳಿಗೆ ತೊಂದರೆಯಾಗಿದ್ದು ಗಮನಕ್ಕೆ ಬಂದಿದೆ. ಆದರೆ, ಎನ್‌ಆರ್‌ಎಚ್‌ಎಂ ಯೋಜನೆ ಅನುಷ್ಠಾನ ಅಧಿಕಾರಿಗಳು ಕೆಲ ನ್ಯೂನತೆಗಳನ್ನು ಕಂಡು ಹಿಡಿದಿದ್ದರಿಂದಲೇ ಅನುದಾನ ಬಿಡುಗಡೆಗೆ ವಿಳಂಬವಾಗಿದೆ. ಶೀಘ್ರ ಸರಿಪಡಿಸಿ, ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಲಸಿಕಾಧಿಕಾರಿ ಡಾ. ರಮೇಶ ಮೂಲಿಮನಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಎಂ.ಎಂ. ಕಟ್ಟಿಮನಿ, ಜಿಲ್ಲಾ ಎನ್‌ಆರ್‌ಎಚ್‌ಎಂ ಕಾರ್ಯಕ್ರಮ ವ್ಯವಸ್ಥಾಪಕಿ ಸೋನಾಲಿ ಬಳ್ಳೊಳ್ಳಿ, ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರು, ತಾಲೂಕಾಸ್ಪತ್ರೆ ಆಡಳಿತಾಧಿಕಾರಿ ಡಾ. ಕೆ.ಎಸ್. ರೆಡ್ಡಿ ಇದ್ದರು.
ಕಮಿಟಿಗೆ ಪತ್ರ: ತಾಲೂಕು ಕೇಂದ್ರಕ್ಕೆ ಹೊಸದಾಗಿ ಮಂಜೂರಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ನಿವೇಶನ ಕೊರತೆ ಎದುರಾಗಿದೆ. ಖರೀದಿಗೋಸ್ಕರ ಆರೋಗ್ಯ ಇಲಾಖೆ ಪ್ಲಾನಿಂಗ್ ಕಮಿಟಿ ಅಧಿಕಾರಿಗಳಿಗೆ ಪತ್ರ ಬರೆದು ಅನುದಾನ ಬಿಡುಗಡೆಗೆ ವಿನಂತಿಸಿಕೊಳ್ಳಲಾಗಿದೆ. ಅಲ್ಲದೆ ಅಲ್ಲಿಂದ ಸಕರಾತ್ಮಕ ಉತ್ತರ ಬಂದಿದ್ದು, ಈ ಕುರಿತು ಹಣಕಾಸು ಇಲಾಖೆಗೆ ಪತ್ರ ಬರೆದಿರುವ ಬಗ್ಗೆ ಮಾಹಿತಿ ಬಂದಿದೆ ಎಂದರು.
8 ವಾಹನಗಳು ಮಂಜೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾದ ತಾಯಿ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ಸರ್ಕಾರ ನಗು-ಮಗು ಎಂಬ ಹೆಸರಿನಡಿ ಹೊಸ ಮಾದರಿ ಆಂಬ್ಯುಲೆನ್ಸ್ ನೀಡುತ್ತಿದ್ದು, ಇದರಲ್ಲಿ ಜಿಲ್ಲೆಯ ಕುಷ್ಟಗಿ ಆಸ್ಪತ್ರೆಗೆ ಒಂದು ವಾಹನ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಬಿ. ದಾನರೆಡ್ಡಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement