ಸುದ್ದಿ ಸಂಕ್ಷೇಪ
ಕಿಸಾನ್ ದಿನಾಚರಣೆ
ಶಿಗ್ಗಾಂವಿ: ತಾಲೂಕು ಕೃಷಿ ಪಂಪ್ಸೆಟ್ ಬಳಕೆದಾರ ರೈತ ಸಂಘದ ಆಶ್ರಯದಲ್ಲಿ ಡಿ. 23ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ವಿರಕ್ತ ಮಠದ ಸಭಾಭವನದಲ್ಲಿ ರಾಷ್ಟ್ರೀಯ ರೈತರ (ಕಿಸಾನ್) ದಿನಾಚರಣೆ ಆಯೋಜಿಸಲಾಗಿದೆ. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಶಾಸಕ ಬಸವರಾಜ ಬೊಮ್ಮಾಯಿ, ಸೋಮಣ್ಣ ಬೇವಿನಮರದ, ಸಂಸದ ಪ್ರಹ್ಲಾದ ಜೋಶಿ ಪಾಲ್ಗೊಳ್ಳಲಿದ್ದಾರೆ. ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಹೋರಾಟದ ಮುಖಾಂತರ ಪರಿಹಾರ ಕಂಡುಕೊಳ್ಳಲು ಹಾಗೂ ಸ್ಥಳೀಯವಾಗಿ ರೈತರ ಸಮಸ್ಯೆ ಕುರಿತು ಚರ್ಚಿಸಲಾಗುವುದು. ರೈತ ಬಾಂಧವರು ಪಾಲ್ಗೊಳ್ಳುವಂತೆ ಕೃಷಿ ಪಂಪ್ ಸೆಟ್ ಬಳಕೆದಾರರ ಸಂಘ ಪ್ರಕಟಣೆಯಲ್ಲಿ ಕೋರಿದೆ.
ಇಂದು ರೈತ ಸಮಾವೇಶ
ಹಿರೇಕೆರೂರು: ರೈತ ಸಂಘದ ತಾಲೂಕು ಘಟಕ ಡಿ. 23ರಂದು ರೈತ ದಿನಾಚರಣೆ ಮತ್ತು ರೈತ ಸಮಾವೇಶ ಹಮ್ಮಿಕೊಂಡಿದೆ. ಬೆಳಗ್ಗೆ 11ಕ್ಕೆ ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ತಹಸೀಲ್ದಾರ್ ಮತ್ತು ಹೆಸ್ಕಾಂ ಅಧಿಕಾರಿಗಳಿಗೆ ರೈತರ ಬೇಡಿಕೆಗಳ ಮನವಿ ಸಲ್ಲಿಸಲಾಗುವುದು. ಬಳಿಕ ಶ್ರೀ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾವೇಶ ನಡೆಯಲಿದೆ. ಸಿರಿಧಾನ್ಯಗಳ ಸಿರಿವಂತ ಪ್ರಶಸ್ತಿ ಪುರಸ್ಕೃತ ರೈತ ಈಶ್ವರಪ್ಪ ಬಣಕಾರ ಅಧ್ಯಕ್ಷತೆ ವಹಿಸುವರು. ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಎ. ಲಕ್ಷೀನಾರಾಯಣ ಗೌಡ, ಕಾರ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ, ಉಪಾಧ್ಯಕ್ಷ ಓಂಕಾರಪ್ಪ ವಾಸನದ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಬಿ.ಟಿ. ಲಲಿತಾ ನಾಯಕ, ಶ್ಯಾಮಸುಂದರ ಕೀರ್ತಿ, ಜಯಶ್ರೀ ರಾಜ, ನಟ ಎಸ್.ಎಸ್. ಸರಗಣಾಚಾರಿ, ಡಾ ವಿ.ಎನ್. ವಾಸುದೇವ, ಗದಿಗೆಪ್ಪ ದಾನಮ್ಮನವರ, ಎಚ್.ಎಸ್. ಮಾಸ್ತಿ, ಸುಭಾಸ ಗವಿಯಪ್ಪನವರ, ಈರಣ್ಣ ಹಲಗೇರಿ, ರಾಜು ಪೂಜಾರ, ಎಚ್.ಕೆ. ಮಂಜುನಾಥಗೌಡ, ಲೋಕನಗೌಡ ಪಾಟೀಲ, ಎಂ.ಎಚ್. ಹರವಿಶೆಟ್ಟರ ಪಾಲ್ಗೊಳ್ಳುವರೆಂದು ರೈತ ಸಂಘದ ತಾಲೂಕಾಧ್ಯಕ್ಷ ರಾಜಶೇಖರ ದೂದಿಹಳ್ಳಿ, ಕಾರ್ಯದರ್ಶಿ ಮಲ್ಲನಗೌಡ ಸೊರಟೂರ ತಿಳಿಸಿದ್ದಾರೆ.
ಇಂದು ರೈತ ದಿನಾಚರಣೆ
ರಾಣಿಬೆನ್ನೂರು: ನಗರದ ಹಲಗೇರಿ ರಸ್ತೆಯಲ್ಲಿರುವ ಕೃಷಿ ಇಲಾಖೆ ಆವರಣದಲ್ಲಿ ರೈತ ದಿನಾಚರಣೆ ನಿಮಿತ್ತ ಡಿ. 23ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ತಾಲೂಕಿನ ರೈತರಿಗೆ ಹಾಗೂ ರೈತ ಮಹಿಳೆಯರಿಗೆ ಕೃಷಿ ಅಭಿವೃದ್ಧಿ, ಹೊಸ ಕೃಷಿ ಪದ್ಧತಿ, ರೋಗ ನಿರೋಧಕ ಔಷಧಿ ಬಳಕೆ, ಸಾವಯವ ಕೃಷಿ ಪದ್ಧತಿ ಕುರಿತು ತಜ್ಞರು ಸಮಗ್ರ ಮಾಹಿತಿ ನೀಡಲಿದ್ದಾರೆ. ಶಾಸಕ ಕೆ.ಬಿ. ಕೋಳಿವಾಡ ಕಾರ್ಯಕ್ರಮ ಉದ್ಘಾಟಿಸುವರು. ಜನಪ್ರತಿನಿಧಿಗಳು, ಕೃಷಿಕ ಸಮಾಜದ ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದು ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗನಗೌಡ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.