ಸೇವೆಯ ಅರ್ಥ ತಿಳಿಸಿದ ರೋಟರಿ ಕ್ಲಬ್: ನಾಯಕ್
ಬ್ಯಾಡಗಿ: ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮೂಲಕ ರೋಟರಿ ಸಂಸ್ಥೆ ನಿಸ್ವಾರ್ಥ ಸೇವೆಯ ಅರ್ಥವನ್ನು ವಿಶ್ವಕ್ಕೆ ತಿಳಿಸಿಕೊಟ್ಟಿತೆಂದು ತಹಸೀಲ್ದಾರ್ ಶಿವಶಂಕರ ನಾಯಕ ಶ್ಲಾಘಿಸಿದರು.
ಸ್ಥಳೀಯ ರೋಟರಿ ಸಂಸ್ಥೆಯ ಬಿಇಎಂಎಸ್ ಪದವಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ 6ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಬಲರು, ದುರ್ಬಲರೆಂಬ ವರ್ಗಗಳು ಅನಾದಿ ಕಾಲದಿಂದಲೂ ಇವೆ. ಸಮಾಜವನ್ನು ಒಗ್ಗೂಡಿಸಲು ಬಸವಾದಿ ಶರಣರು ಮಾಡಿದ ಹೋರಾಟ ರೋಟರಿ ಸಂಸ್ಥೆ ಮೂಲಕ ಸಾರ್ಥಕವಾಗಿದೆ. ಎಲ್ಲರೂ ಸ್ವಾರ್ಥವನ್ನೇ ಬಯಸಿದರೆ ಸಮಾಜ ಅಭಿವೃದ್ಧಿ ಆಗುವುದು ಹೇಗೆ? ದಾರ್ಶನಿಕರು, ಚಿಂತಕರ ಸಂದೇಶ ಅಳವಡಿಸಿಕೊಂಡು ಬದುಕು ಸಾರ್ಥಕ ಮಾಡಿಕೊಳ್ಳೋಣ ಎಂದರು.
ರೋಟರಿ ಸಂಸ್ಥೆಯ ನಿಕಟಪೂರ್ವ ಸಹ ಪ್ರಾಂತಪಾಲ ಡಾ ಬಸವರಾಜ ಕೇಲಗಾರ ಮಾತನಾಡಿ, 1988ರಲ್ಲಿ ರೋಟರಿ ಸಂಸ್ಥೆ ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪೋಲಿಯೋ ನಿರ್ಮೂಲನ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತು ಎಂದು ಸ್ಮರಿಸಿದರು. ರೋಟರಿ ಅಧ್ಯಕ್ಷ ಜೆ.ಎಚ್. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಡಾ ಎ.ಎಂ. ಸೌದಾಗರ ವರದಿ ವಾಚಿಸಿದರು. ರಸ್ತೆ ಅಗಲೀಕರಣ ಪ್ರತಿಭಟನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಟೋ ಚಾಲಕನ ಜೀವ ಉಳಿಸಿದ ತಹಸೀಲ್ದಾರ್ ಶಿವಶಂಕರ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಅಧ್ಯಕ್ಷ ಪರಶುರಾಮ ಮೇಲಗಿರಿ, ಕಾರ್ಯದರ್ಶಿ ಮಾಲತೇಶ ಅರಳಿಮಟ್ಟಿ, ವಿಶ್ವನಾಥ ಅಂಕಲಕೋಟಿ, ಅನಿಲಕುಮಾರ ಬೊಡ್ಡಪಾಟಿ, ವಿ.ಬಿ. ಶಿಡೇನೂರು, ಪ್ರಾಚಾರ್ಯ ಎಸ್.ಎನ್. ಯಮನಕ್ಕನವರ, ಪುರಸಭೆ ಸದಸ್ಯ ಪ್ರಶಾಂತ ಯಾದವಾಡ ಇದ್ದರು. ಶಿಡೇನೂರಿನ ಮೊರಾರ್ಜಿ ವಸತಿ ಶಾಲೆ ಮಕ್ಕಳು ಹಾಗೂ ಬಿ. ಬಾಯ್ಸ್ ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ಡಾ ಎಸ್.ಎನ್. ನಿಡಗುಂದಿ ನಿರೂಪಿಸಿದರು. ಡಾ ಪ್ರಕಾಶ ಭಸ್ಮೆ ವಂದಿಸಿದರು.