ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗೋಹತ್ಯೆ ನಿಷೇಧಿಸಲು ಸರ್ಕಾರ ವಿಫಲ

Mainashree
Updated On : 24 Dec 2013, 10:29 am

ಹಿರೇಕೆರೂರು: ರಾಜ್ಯದಲ್ಲಿ ಗೋ-ಹತ್ಯೆ ನಿಷೇಧಿಸಲು ಸರ್ಕಾರ ವಿಫಲವಾಗಿದೆ. ಹಾರೋವಳ್ಳಿ ಬಳಿ ವಿದೇಶಿ ಕಂಪನಿಯೊಂದು ಕಸಾಯಿಖಾನೆ ಸ್ಥಾಪಿಸಲು ಮುಂದಾಗಿದ್ದು, ಗೋಹತ್ಯೆ ಹೆಚ್ಚುವ ಆತಂಕವಿದೆ. ರೈತರು ಸಂಘಟಿತರಾಗಿ ಹೋರಾಡಬೇಕಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಎ. ಲಕ್ಷ್ಮೀನಾರಾಯಣ ಗೌಡ ಕರೆ ನೀಡಿದರು.
ಪಟ್ಟಣದ ಬಯಲು ಬಸವೇಶ್ವರ ದೇವಾಲಯದ ಆವರಣದಲ್ಲಿ ರೈತ ದಿನಾಚರಣೆ ಹಾಗೂ ರೈತ ಸಮಾವೇಶ ಉದ್ಘಾಟಿಸಿದ ಅವರು, ರೈತರು ಸ್ವಾಭಿಮಾನಿಗಳಾಗಿ ಜೀವನ ನಡೆಸಬೇಕು. ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು. ಸಮಯಕ್ಕೆ ಸರಿಯಾಗಿ ವಿದ್ಯುತ್, ಬಿತ್ತನೆ ಬೀಜ, ಗೊಬ್ಬರ ಕೊಡುವ ವ್ಯವಸ್ಥೆಯಾಗಬೇಕು ಎಂದರು.
ಮಹಿಳಾ ರಾಜ್ಯ ಕಾರ್ಯದರ್ಶಿ ಜಯಶ್ರೀ ರಾಜ್ ಮಾತನಾಡಿ, ರೈತರು ಬೇಡಿಕೆಗಳ ಈಡೇರಿಕೆಗೆ ಸಂಘಟಿತರಾಗಬೇಕು ಎಂದರು. ರೈತರಿಗೆ ಸಕಾಲಕ್ಕೆ ವಿದ್ಯುತ್ ಒದಗಿಸಬೇಕು. ಸುಟ್ಟ ಟಿಸಿಗಳನ್ನು ತಕ್ಷಣವೇ ಬದಲಾಯಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರದ ಮಟ್ಟದಲ್ಲಿ ರೈತರ ದಿನ ಆಚರಿಸಬೇಕು. ಮಹಿಳಾ ವಸತಿ ನಿಲಯಗಳಿಗೆ ಮಹಿಳಾ ವಾರ್ಡನ್‌ಗಳನ್ನು ನೇಮಿಸಬೇಕು. ರೈತರಿಗೆ ಕಡಿಮೆ ದರದಲ್ಲಿ ಮರಳು ಸಿಗಬೇಕು. ಕಳಪೆ ಬೀಜಗಳಿಂದ ವಿಪರೀತ ಹಾನಿಯಾಗಿದ್ದು, ತಕ್ಷಣ ಪರಿಹಾರಕ್ಕೆ ವ್ಯವಸ್ಥೆ ಮಾಡಬೇಕು. ತಾಲೂಕಿನ ರಟ್ಟಿಹಳ್ಳಿ ಏತ ನೀರಾವರಿ, ಭೈರನಪಾದ ನೀರಾವರಿ ಯೋಜನೆ ಪುನಃ ಪ್ರಾರಂಭವಾಗಬೇಕು. ಗೋವಿನಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ರು. 1800, ಬತ್ತಕ್ಕೆ ರು. 1800, ಹತ್ತಿಗೆ ರು. 8 ಸಾವಿರ, ಪ್ರತಿ ಟನ್ ಕಬ್ಬಿಗೆ ರು. 3800 ಬೆಂಬಲ ಬೆಲೆ ಘೋಷಿಸಬೇಕು ಎಂಬ ಮನವಿಯನ್ನು  ರೈತ ಸಂಘದ ತಾಲೂಕು ಅಧ್ಯಕ್ಷ ರಾಜಶೇಖರ ದೂದಿಹಳ್ಳಿ ನೇತೃತ್ವದಲ್ಲಿ ತಹಸೀಲ್ದಾರ್ ತುಷಾರ್ ಹೊಸೂರ್‌ಗೆ ಸಲ್ಲಿಸಲಾಯಿತು.
ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದವರನ್ನು ರೈತ ಸಂಘದ ವತಿಯಿಂದ ಸನ್ಮಾನಿಸಿಲಾಯಿತು. ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್, ಡಾ೤ ವಿ.ಎನ್. ವಾಸುದೇವ, ಜಿಲ್ಲಾಧ್ಯಕ್ಷ ಸುಭಾಸ ಗವಿಯಪ್ಪನವರ, ರಾಜು ಪೂಜಾರ, ಕೋಶಾಧ್ಯಕ್ಷ ಶಾಮಸುಂದರ ಕೀರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಸರಗಣಚಾರಿ, ಧಾರವಾಹಿ ನಟ ಸಂತೋಷ ಹೆಗ್ಡೆ, ಪೀರಪ್ಪ ಪೂಜಾರ, ಶಿವನಗೌಡ ಪಾಟೀಲ್, ಮಲ್ಲನಗೌಡ ಸೊರಟೂರ, ಈರನಗೌಡ ಪ್ಯಾಟಿಗೌಡ್ರ, ಹನುಮಂತಪ್ಪ ಕಬ್ಬಾರ, ಚಂದ್ರು ಜೋಗಿಹಳ್ಳಿ, ಉಮೇಶ ಹೊಸಮನಿ ಇದ್ದರು. ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement