ಧರ್ಮ ಕಾರ್ಯದಿಂದ ಸಮಾಜ ಪರಿವರ್ತನೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಡಿ. 23
ಜನಪ್ರತಿನಿಧಿಗಳು ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡರೆ ಸಮಾಜ ಪರಿವರ್ತನೆಗೆ ಶಕ್ತಿ ತುಂಬಲು ಸಾಧ್ಯ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮಿಗಳು ಕರೆ ನೀಡಿದರು.
ಹಾನಗಲ್ಲಿನ ವಿರಕ್ತಮಠದ ಆವರಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಅವರು, ಹಾನಗಲ್ಲು ಗಾನ, ಯೋಗ, ಧರ್ಮ ಹಾಗೂ ಧರ್ಯಾಚಾರ್ಯರನ್ನು ನೀಡಿದ ಪುಣ್ಯಭೂಮಿ. ಇಲ್ಲಿನ ವಿರಕ್ತಮಠ ಕರ್ನಾಟಕದ ಮಠಗಳಿಗೆ ಒಂದು ಆದರ್ಶ. ಈ ಆವರಣದಲ್ಲಿ ಸ್ವಾಭಿಮಾನದ ಸಂಕೇತವಾದ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಸಮಾನತೆಯನ್ನು ಸಾರಿದ ವಿಶ್ವಗುರು ಬಸವಣ್ಣನವರ ಪುತ್ಥಳಿಗಳನ್ನು ಸ್ಥಾಪಿಸಿರುವುದು ಶ್ರೇಷ್ಠ ಕಾರ್ಯ. ಮಠಗಳು ಪೂಜೆ-ನೈವೇದ್ಯಕ್ಕೆ ಸೀಮಿತವಾಗದೆ ಸಮಾಜಮುಖಿಯಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಧಾರ್ಮಿಕ ಸಭೆ ಉದ್ಘಾಟಿಸಿದ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ, ಬ್ರಿಟಿಷರನ್ನು ಸದೆಬಡಿದ ವೀರಮಹಿಳೆ ಕಿತ್ತೂರು ಚನ್ನಮ್ಮ. ದೆಹಲಿಯ ಸಂಸತ್ ಭವನದೆದುರು ಚನ್ನಮ್ಮ ಹಾಗೂ ಬಸವಣ್ಣನವರ ಪುತ್ಥಳಿ ಸ್ಥಾಪಿಸಿರುವುದು ಸ್ವತಂತ್ರ ರಾಷ್ಟ್ರಧರ್ಮ ಹಾಗೂ ಜಾತ್ಯತೀತ ಧರ್ಮದ ಸಂಕೇತವಾಗಿದೆ. ಇಲ್ಲಿ ಈ ಇಬ್ಬರ ಪುತ್ಥಳಿ ಸ್ಥಾಪಿಸಿದ್ದು ದೂರದೃಷ್ಟಿಯ ಕಾರ್ಯ. ಕಿತ್ತೂರು ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಆಯುಧಗಳು ಇನ್ನೂ ಬ್ರಿಟಿಷ್ ನಾಡಿನಲ್ಲೇ ಉಳಿದಿವೆ. ಅವುಗಳನ್ನು ಕನ್ನಡನಾಡಿಗೆ ತರುವ ಕಾರ್ಯ ಸರ್ಕಾರದಿಂದ ನಡೆಯಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ದುಡಿಯುವವರು ಹಾಗೂ ದುಡಿಸಿಕೊಳ್ಳುವವರಿಗೆ ಸಮಾನ ಗೌರವ ಸಿಕ್ಕಾಗ ಮಾತ್ರ ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯ. ಕಾಯಕ ದೈವತ್ವವನ್ನು ಆಧರಿಸಬೇಕು. ವೈಯಕ್ತಿಕ ಬದುಕಿಗೆ ಸ್ವಾತಂತ್ರ್ಯ ವಜ್ರ ಕವಚವಿದ್ದಂತೆ. ಇದು ಸಂತೋಷದ ದಾರಿಯೂ ಹೌದು. ಜ್ಞಾನ, ಧರ್ಮ, ರಂಗಕಾರ್ಯಗಳು ವಿಜೃಂಭಿಸುವ ಅಗತ್ಯವಿದೆ ಎಂದರು.
ಮಾಜಿ ಸಚಿವ ಸಿ.ಎಂ. ಉದಾಸಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಮನೋಹರ ತಹಶೀಲ್ದಾರ, ಸಂಸದ ಶಿವಕುಮಾರ ಉದಾಸಿ ಇದ್ದರು.
'ಕಾರಣಿಕ' ಗ್ರಂಥದ ದಾನಿಗಳಾದ ಎಸ್.ಟಿ. ಪಾಟೀಲ ದಂಪತಿಯನ್ನು ಹಾಗೂ 12 ದಿನಗಳ ಕಾಲ ಪ್ರವಚನ ನೀಡಿದ ಬೆಳಗಾವಿ ಕುಮಾರದೇವರನ್ನು ಸನ್ಮಾನಿಸಲಾಯಿತು. ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮಿಗಳು, ಮುತ್ತಿನಕಂತಿಮಠದ ಚಂದ್ರಶೇಖರ ದೇವರು ಇದ್ದರು.
ಜನತಾ ಬಾಲಕಿಯರ ಪ್ರೌಢಶಾಲೆ ಹಾಗೂ ಕುಮಾರೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಶ್ರದ್ಧಾಂಜಲಿ
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಸಭೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿತು.