ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರಗತಿಗಾಗಿ ಒಳಿತನ್ನು ಪ್ರೋತ್ಸಾಹಿಸಿ

Mainashree
Updated On : 24 Dec 2013, 10:29 am

ಹಾನಗಲ್ಲ: ಬಲಿಷ್ಠ ವೈರಿಗಳನ್ನು ಮಣಿಸಿ ಯಶ ಪಡೆಯಲು ಸಾಧ್ಯ. ಆದರೆ ಮನುಷ್ಯ ಎಷ್ಟೇ ಶಕ್ತಿ ಸಾಮರ್ಥ್ಯ ಹೊಂದಿದ್ದರೂ ಒಳಗಿನವರ ಮೋಸಕ್ಕೆ ಬಲಿಯಾದ ಸಂದರ್ಭಗಳು ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ವಿಷಾದದಿಂದ ನುಡಿದರು.
ವಿರಕ್ತಮಠದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಕಂಚಿನ ಪುತ್ಥಳಿ ಅನಾವರಣದ ಅಂಗವಾಗಿ ನಡೆದ ಶರಣರು ಹಾಗೂ ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳ ಜೀವನ ದರ್ಶನದ 12 ದಿನಗಳ ಪ್ರವಚನ ಮಂಗಲ ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜ ಸೇವೆ ಸಲ್ಲಿಸುವವರನ್ನು ಸಹಿಸದೆ ಕಾಲೆಳೆಯುತ್ತಲೇ ಬಂದಿರುವ ಇತಿಹಾಸವಿದೆ. ಒಳ್ಳೆಯದನ್ನು ನೋಡಿ ಸಹಿಸಿಕೊಳ್ಳಲಾಗದ ದೌರ್ಬಲ್ಯ ಈ ಸಮಾಜವನ್ನು ಕಾಡುತ್ತಿದೆ. ಪ್ರಗತಿಗಾಗಿ ಪ್ರೋತ್ಸಾಹದ ಅಗತ್ಯವಿದೆ. ಒಳ್ಳೆಯವರನ್ನು ಜೀವಂತವಿರುವಾಗ ಕಾಡಿ ಅವರ ಕಾಲವಾದ ಮೇಲೆ ಹೊಗಳುವ ಟೊಳ್ಳು ಪ್ರೀತಿಗೆ ಅರ್ಥವಿಲ್ಲ. ಮನುಷ್ಯ ಒಳ್ಳೆಯ ಕಾರ್ಯಗಳಿಗೆ  ಸೇತುವೆಯಾಗಬೇಕು, ಅಡ್ಡಗೋಡೆ ಆಗಬಾರದು. ಅವಕಾಶಗಳ ಸದ್ಬಳಕೆಯಾಗಲಿ ಎಂದರು.
ಕಾಯಕ ಕಲಿಸುವವನೇ ನಾಯಕ
ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಕಾಯಕ ಕಲಿಸುವವನೇ ನಿಜವಾದ ನಾಯಕ. ಸಮಾಜದ ಹಿತಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟ ಮಹಾಪುರುಷರು ನಮ್ಮ ಆದರ್ಶಗಳಾಗಬೇಕು. ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳು ಸ್ವಾಮಿಗಳ ಸ್ವಾಮಿಗಳಾಗಿದ್ದರು. ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ನಿರಂತರವಾಗಿ ನಡೆಯುತ್ತ ಸಮಾಜದಲ್ಲಿ ಸತ್ಕಾರ್ಯದ ಜಾಗೃತಿ ನಡೆಯುವಂತಾಗಬೇಕು. ಪುರಾಣ ಪ್ರವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ನಡೆಯಬೇಕಿದೆ. ಹಾನಗಲ್ಲು ಒಂದು ಶಕ್ತಿ ಕೇಂದ್ರ, ಧಾರ್ಮಿಕ ಜಾಗೃತಿಯ ಸಿರಿ ನಾಡು ಎಂದರು.
ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ಸಿ.ಎಂ. ಉದಾಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾನಗಲ್ಲ ಶ್ರೀಮಠದ ಮೂಲಕ ನಿರಂತರವಾಗಿ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ನಡೆದು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಆದರ್ಶವಾಗಬೇಕಾಗಿದೆ. ಪ್ರವಚನ ಹಾಗೂ ಈರ್ವರು ಮಹಾತ್ಮರ ಪುತ್ಥಳಿ ಅನಾವರಣದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಉತ್ತಮ ವಾತಾವರಣ ನಿರ್ಮಿಸುವುದಲ್ಲದೆ ಕಲೆಯನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.
ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಳಗಾವಿ ರುದ್ರಾಕ್ಷಿ ಮಠದ ಕುಮಾರ ದೇವರು, ಕೂಡಲದ ಗುರುನಂಜೇಶ್ವರ ಶಿವಾಚಾರ್ಯರು, ಬೊಮ್ಮನಹಳ್ಳಿಯ ಶಿವಯೋಗೀಶ್ವರ ಸ್ವಾಮೀಜಿ, ಹೋತನಹಳ್ಳಿಯ ಸಿದ್ದಾರೂಢಮಠದ ಶಂಕರಾನಂದ ಸ್ವಾಮೀಜಿ, ಅಕ್ಕಿಆಲೂರಿನ ಮುತ್ತಿನಕಂತಿ ಹಿರೇಮಠದ ಚಂದ್ರಶೇಖರ ದೇವರು, ಬಿಜಕಲ್ಲ ವಿರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು.
ಪ್ರವಚನದಲ್ಲಿ ಸಂಗೀತ ಸೇವೆ ಮಾಡಿದ ಗವಾಯಿ ಸಂಗಮೇಶ ಪಾಟೀಲ, ವಾಯಲಿನ್ ವಾದಕ ಹನುಮಂತಪ್ಪ ಕಾಮನಹಳ್ಳಿ, ತಬಲಾ ಸಾಥ್ ನೀಡಿದ ಬಸವರಾಜ ಚಳಗೇರಿ ಅವರನ್ನು ಸನ್ಮಾನಿಸಲಾಯಿತು.
ಹುಬ್ಬಳ್ಳಿ ಮೂರುಸಾವಿರ ಮಠದ ಕುಮಾರೇಶ್ವರ ಶಿವಯೋಗಿ ಸಾಧಕರ ಸಂಘದ ಶ್ರೀಮಲ್ಲಿಕಾರ್ಜುನ ದೇವರು ಯೋಗ ಪ್ರದರ್ಶನ ನೀಡಿದರು. ವಿದ್ಯಾರ್ಥಿನಿ ರೇಖಾ ದೊಡ್ಡಮನಿ ದೇಶ, ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದರು. ಮಹಾರಾಜಪೇಟ ಸಿಆರ್‌ಸಿ ಸಂಪನ್ಮೂಲ ವ್ಯಕ್ತಿ ಲಿಂಗರಾಜ ದೇಟೀನ ಸಂಗ್ರಹಿಸಿದ 'ತನುಕರಗದವರಲ್ಲಿ' ಕೈಪಿಡಿಯನ್ನು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಬಿಡುಗಡೆಗೊಳಿಸಿದರು. ಸಾಹಿತಿ ಪ್ರೊ೤ ಮಾರುತಿ ಶಿಡ್ಲಾಪುರ ಕಾರ್ಯಕ್ರಮ ಸಂಯೋಜಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement