ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೆಣಸು ಧಾರಣೆ ಕುಸಿತ: ಪ್ರತಿಭಟನೆ

Mainashree
Updated On : 24 Dec 2013, 10:27 am

ಬ್ಯಾಡಗಿ: ರೈತ ದಿನಾಚರಣೆಯಂದೂ ರೈತರ ಕಷ್ಟಕ್ಕೆ ಕೊನೆಯಿರಲಿಲ್ಲ. ಮೆಣಸಿನಕಾಯಿ ಧಾರಣೆಯಲ್ಲಿ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ರೈತರು, ಕಚೇರಿಗೆ ಮುತ್ತಿಗೆ ಹಾಕಿದರು.
ಕಳೆದ ವಾರ ಸ್ಥಳೀಯ ಮಾರುಕಟ್ಟೆಯಲ್ಲಿ 20 ಸಾವಿರ ಚೀಲ ಮೆಣಸಿನಕಾಯಿ ಆವಕವಾಗಿತ್ತು. ಡಬ್ಬಿ ತಳಿ ರು. 9 ರಿಂದ 22 ಸಾವಿರ, ಬ್ಯಾಡಗಿ ಕಡ್ಡಿ ತಳಿ (ಕೆಡಿಎಲ್) ರು. 6ರಿಂದ 14 ಸಾವಿರ ಹಾಗೂ ಗುಂಟೂರ ತಳಿ ರು. 2ರಿಂದ 8 ಸಾವಿರ ದರದಲ್ಲಿ ಮಾರಾಟವಾಗಿದ್ದವು. ಈ ವಾರದ ಮೊದಲ ದಿನವೇ 35 ಸಾವಿರ ಚೀಲದಷ್ಟು ಆವಕವಾಗಿದ್ದು, ದರ ಸರಿಸುಮಾರು ರು. 3-4 ಸಾವಿರದಷ್ಟು ಇಳಿದಿದ್ದು ರೈತರನ್ನು ಕೆರಳಿಸಿತು. ಡಬ್ಬಿ ತಳಿ ರು. 2ರಿಂದ 16 ಸಾವಿರ, ಬ್ಯಾಡಗಿ ಕಡ್ಡಿ ರು. 2ರಿಂದ 11 ಸಾವಿರ, ಗುಂಟೂರ ತಳಿ ರು. 2ರಿಂದ 9 ಸಾವಿರ ತನಕ ಮಾರಾಟವಾಯಿತು.
ಬೆರಳೆಣಿಕೆಯಷ್ಟಿದ್ದ ಪೊಲೀಸರನ್ನೂ ಲೆಕ್ಕಿಸದ ರೈತರು ಎಪಿಎಂಸಿ ಮುಂಭಾಗದ ಗೇಟ್ ತಳ್ಳಿ, ಆವರಣಕ್ಕೆ ನುಗ್ಗಿದರು. ಟೆಂಡರ್ ಫಾರಂ ನೀಡುತ್ತಿದ್ದ ಸ್ಥಳದಲ್ಲಿ ದಾಂದಲೆ ನಡೆಸಿದರು. ಸಿಬ್ಬಂದಿ ಹಾಗೂ ಪೊಲೀಸರು ರೈತರನ್ನು ಶಾಂತಗೊಳಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ಯಾವುದೇ ಕಾರಣಕ್ಕೂ ರೈತರ ಚೀಲಗಳನ್ನು ತೂಕ ಮಾಡದಂತೆ ಧ್ವನಿ ವರ್ಧಕದಲ್ಲಿ ಘೋಷಿಸಲು ಪಟ್ಟು ಹಿಡಿದರು. ರೈತರ ಒತ್ತಡಕ್ಕೆ ಮಣಿದ ಎಪಿಎಂಸಿ ಕಾರ್ಯದರ್ಶಿ ಓಬಳಪ್ಪ ತೂಕ ಸ್ಥಗಿತಗೊಳಿಸಿದರು. ಇದರಿಂದ 4 ತಾಸು ವಿಳಂಬವಾಯಿತು.
ರೈತ ಮುಖಂಡ ಅಂಕಲಿ ಮಾತನಾಡಿ, ಒಂದೇ ವಾರದಲ್ಲಿ ದರ ಐದಾರು ಸಾವಿರ ಇಳಿಕೆಯಾದರೆ ರೈತ ಸಾಯಬೇಕೇ? ಕೃಷಿ ಮೇಲಿನ ವೆಚ್ಚಕ್ಕೆ ಕಡಿವಾಣ ಹಾಕದ ಸರ್ಕಾರ ಕಷ್ಟಪಟ್ಟು ಬೆಳೆದಿರುವ ಬೆಳೆಗಾದರೂ ಯೋಗ್ಯ ದರವನ್ನು ನೀಡಲಿ. ವ್ಯಾಪಾರಸ್ಥರ ಕೈಗೊಂಬೆಯಂತೆ ವರ್ತಿಸುತ್ತಿರುವ ಎಪಿಎಂಸಿ ಸಿಬ್ಬಂದಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಕ್ವಿಂಟಲ್‌ಗೆ ಕನಿಷ್ಠ ರು. 3 ಸಾವಿರ ದರ ಹೆಚ್ಚಿಸಿ ಎಂದು ಆಗ್ರಹಿಸಿದರು.
ಮಾಜಿ ಶಾಸಕ, ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಸ್ಥಳಕ್ಕೆ ಧಾವಿಸಿ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತ ಬ್ಯಾಡಗಿಗೂ ಅನ್ವಯಿಸುತ್ತದೆ. ರೈತರಿಗೆ ಮೋಸ ಆಗದಂತೆ ಕ್ರಮ ಜರುಗಿಸಲಾಗಿದೆ. ವ್ಯಾಪಾರಸ್ಥರ ದರಕ್ಕೆ ಮಾರಾಟ ಮಾಡುವುದು ರೈತರ ವಿವೇಚನೆಗೆ ಬಿಟ್ಟಿದ್ದು ಎಂದು ಸಮಾಧಾನ ಹೇಳಿದರು. ಆದರೂ ಸಮಾಧಾನಗೊಳ್ಳದ ರೈತರು, ಬಸ್ ನಿಲ್ದಾಣಕ್ಕೆ ಮೆರವಣಿಗೆಯಲ್ಲಿ ಸಾಗಿ, ಪ್ರತಿಭಟನೆ ಮುಂದುವರಿಸಿದರು. ಇದರಿಂದ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು.
ಅಧಿಕಾರಿಗಳ ಬೀಡು
ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ತಹಸೀಲ್ದಾರ್ ಶಿವಶಂಕರ ನಾಯಕ್, ಎಎಸ್ಪಿ ಜಗಮಯ್ಯ,  ಡಿವೈಎಸ್ಪಿ ಗೋಪಾಲ ಬ್ಯಾಕೋಡ, ಸಿಪಿಐ ಹಾಲಮೂರ್ತಿ ರಾವ್, ಪಿಎಸ್‌ಐ ಗಿರೀಶ್ ಮುಂತಾದವರು ಎಪಿಎಂಸಿ ಆವರಣದಲ್ಲೇ ಬೀಡು ಬಿಟ್ಟು, ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದರು. ಪ್ರತಿಭಟನೆ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement