ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇನ್ನೋವಾ ಕಾರು ಶೋಕಿಗೆ ಚಾಲಕ ಹತ್ಯೆ

Vishwanath S
Updated On : 25 Dec 2013, 12:48 pm

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 24
ರಾಜಕೀಯ ಪಕ್ಷ, ಸಂಘಟನೆಗಳಲ್ಲಿ ಗುರುತಿಸಿಕೊಂಡು ಕಾರಿನ ಶೋಕಿ ಹೊಂದಿದ್ದ ವ್ಯಕ್ತಿಯೊಬ್ಬ ಇನ್ನೋವಾ ಕಾರಿಗಾಗಿ ಅದರ ಚಾಲಕನನ್ನೇ ಹತ್ಯೆ ಮಾಡಿದ್ದ ಪ್ರಕರಣವನ್ನು ಮೂರು ತಿಂಗಳ ಬಳಿಕ ಭೇದಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಇನ್ನೋವಾ ಕಾರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ನಗರದ ರುದ್ರೇಶ ತಂದೆ ಗೋವಿಂದಪ್ಪ, ಕಲ್ಲಹಳ್ಳಿ ಕಾಶಿಪುರ ಬಂಧಿತ ಆರೋಪಿ. ಗೋವಾದಲ್ಲಿ ಇನ್ನೋವಾ ಕಾರಿನ ಚಾಲನಕನಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಪ್ರಶಾಂತ ಅಶೋಕ ನಾಯಕ ಎಂಬಾತನ ಶವ ಕೊಳೆತ ಸ್ಥಿತಿಯಲ್ಲಿ ಅ. 1ರಂದು ರಾಣಿಬೆನ್ನೂರು ಸಮೀಪದ ಹೆಬ್ಬಾಳ ಫಾರ್ಮ್ ಬಳಿ ಸಿಕ್ಕಿತ್ತು. ಸೆ. 21ರಂದೇ ಆತನ ಕೊಲೆಯಾಗಿತ್ತು. ಆದರೆ ವಾರಸುದಾರರು ಇಲ್ಲದ್ದರಿಂದ ಪೊಲೀಸರು ಶವವನ್ನು ಹೂತು, ಪ್ರಕರಣ ದಾಖಲಿಸಿಕೊಂಡಿದ್ದರು. ಗೋವಾದಲ್ಲಿ ಪ್ರಶಾಂತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ರಾಣಿಬೆನ್ನೂರು ಬಳಿ ಅಪರಿಚಿತ ಶವ ಸಿಕ್ಕ ಮಾಹಿತಿ ಪಡೆದು ಇಲ್ಲಿಗೆ ಆಗಮಿಸಿ, ಶವದ ಮೇಲಿದ್ದ ಬಟ್ಟೆ ಆಧಾರದಲ್ಲಿ ಪೋಷಕರು ಇದು ಪ್ರಶಾಂತನದ್ದೇ ಶವ ಎಂದು ಗುರುತಿಸಿದ್ದರು. ಇದಾಗಿ ಮೂರು ತಿಂಗಳ ಬಳಿಕ ಆರೋಪಿ ಸೆರೆ ಸಿಕ್ಕಿದ್ದಾನೆ.
ಎಸ್ಪಿ ಎನ್. ಶಶಿಕುಮಾರ್ ಮಂಗಳವಾರ ಇಲ್ಲಿನ ಶಹರ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದರು. ಆರೋಪಿ ರುದ್ರೇಶನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೂ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.
ಗೋವಾದಿಂದ ಬಾಡಿಗೆ
ಆರೋಪಿ ರುದ್ರೇಶ ಶಿವಮೊಗ್ಗ ನಿವಾಸಿ. ಪ್ರಮುಖ ರಾಜಕೀಯ ಪಕ್ಷ ಹಾಗೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಬಿಕಾಂ ಪದವೀಧರನಾಗಿರುವ ಈತ ವಿಐಪಿಗಳೊಂದಿಗೆ ಫೋಟೋ ತೆಗೆಸಿಕೊಂಡು, ತಾನೂ ಗಣ್ಯರ ರೀತಿಯಲ್ಲೇ ಪೋಸ್ ನೀಡುತ್ತಿದ್ದ. ಆದರೆ ಇದಕ್ಕಾಗಿ ಆತನಿಗೆ ಕಾರು ಬೇಕಾಗಿತ್ತು. ಕಾರಿನ ಶೋಕಿಯೂ ಇತ್ತು. ಸೆಕೆಂಡ್ ಹ್ಯಾಂಡ್ ಕಾರನ್ನೂ ಖರೀದಿಗಾಗಿ ನೋಡಿದ್ದ. ಹೊಸ ಕಾರಿನ ಶೋಕಿ ಇದ್ದ ರುದ್ರೇಶ ತನ್ನ ಸ್ನೇಹಿತನ ಜತೆ ಇನ್ನೋವಾ ಕಾರನ್ನು ಕದಿಯಲು ಸಂಚು ರೂಪಿಸಿದ್ದ. ಗೋವಾಕ್ಕೆ ಹೋಗಿ ಪ್ರಶಾಂತ ನಾಯಕ್‌ರ ಇನ್ನೋವಾ ಕಾರನ್ನು ಬಾಡಿಗೆ ಪಡೆದಿದ್ದರು. ತಾವು ಪ್ರವಾಸಿಗಳೆಂದು ಹೇಳಿ ಶಿವಮೊಗ್ಗಕ್ಕೆ ಬಿಡಲು ರು. 6 ಸಾವಿರ ಬಾಡಿಗೆ ಮಾತನಾಡಿದ್ದರು. ರಾಣಿಬೆನ್ನೂರು ಬಳಿ ಬಂದಾಗ ರುದ್ರೇಶ ಹಾಗೂ ಆತನ ಸ್ನೇಹಿತ ಸೇರಿ ಟವೆಲ್‌ನಿಂದ ಚಾಲಕ ಪ್ರಶಾಂತ ನಾಯಕನ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಫಾರ್ಮ್ ಬಳಿ ಗುರುತು ಸಿಗದಂತೆ ಶವ ಬಿಸಾಕಿ ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದರು ಎಂದು ವಿವರಿಸಿದರು.
ಅಪಘಾತವಾಯಿತು...
ಶಿವಮೊಗ್ಗದಲ್ಲಿ ಪಾರ್ಟಿಯೊಂದರಿಂದ ವಾಪಸ್ ಬರುವ ವೇಳೆ ಬೊಮ್ಮನಕಟ್ಟೆ ಎಂಬಲ್ಲಿ ಕಾರು ಅಪಘಾತಕ್ಕೆ ಈಡಾಗಿತ್ತು. ಅದನ್ನು ರಿಪೇರಿ ಮಾಡಿಸಲು ರುದ್ರೇಶ ಶಿವಮೊಗ್ಗದ ಗ್ಯಾರೇಜೊಂದರಲ್ಲಿ ಬಿಟ್ಟಿದ್ದ. ಗೋವಾ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಎಸ್ಪಿ ಶಶಿಕುಮಾರ್, ಎಎಸ್ಪಿ ಡಿ.ಎಸ್. ಜಗಮೈನವರ, ರಾಣಿಬೆನ್ನೂರು ಡಿಎಸ್ಪಿ ಎಸ್.ಎಚ್. ಗಾಡದ ಮಾರ್ಗದರ್ಶನದಲ್ಲಿ ಸಿಪಿಐ ಲೋಕೇಶ, ಪಿಎಸ್‌ಐ ಎನ್.ಸಿ. ಕಾಡದೇವರ, ನಾಗನಗೌಡ ಐ.ಕೆ., ಸಿಬ್ಬಂದಿ ವೈ.ಎಸ್. ಅಬ್ಬಿಗೇರಿ, ಆರ್.ಕೆ. ನಿಂಗಜ್ಜೇರ, ಎಸ್.ಎಚ್. ಹಾಲಭಾವಿ ಅವರಿದ್ದ ತಂಡ ರಚಿಸಲಾಗಿತ್ತು. ಸೋಮವಾರ ಆರೋಪಿ ಸೆರೆಸಿಕ್ಕಿದ್ದಾನೆ ಎಂದು ಎಸ್ಪಿ ತಿಳಿಸಿದರು.
ಪ್ರಶಾಂತನ ಪೋಷಕರು ಮಗನ ಶವ ತಮಗೆ ಹಸ್ತಾಂತರಿಸುವಂತೆ ಕೇಳಿಕೊಂಡಿದ್ದಾರೆ. ಹೂತಿರುವ ಶವ ಹೊರತೆಗೆದು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ. ವಾರದೊಳಗೆ ವರದಿ ಬರುವ ನಿರೀಕ್ಷೆ ಇದೆ. ಶವ ಪ್ರಶಾಂತನದ್ದೆಂದು ಖಚಿತವಾಗಿದ್ದರೂ ಡಿಎನ್‌ಎ ವರದಿ ಬರುವ ತನಕ ಹಸ್ತಾಂತರಿಸಲು ಸಾಧ್ಯವಿಲ್ಲ. ಕಾನೂನಿನಲ್ಲಿ ಅವಕಾಶವಿದ್ದರೆ ಇನ್ನೆರಡು ದಿನಗಳಲ್ಲಿ ಶವ ಹಸ್ತಾಂತರಿಸುತ್ತೇವೆ ಎಂದು ಶಶಿಕುಮಾರ್ ಹೇಳಿದರು.
ಎಎಸ್ಪಿ ಡಿ.ಎಸ್.ಜಗಮೈನವರ, ಡಿಎಸ್ಪಿ ಎಸ್.ಎಚ್. ಗಾಡದ ಮುಂತಾದವರು ಇದ್ದರು.
ಹತ್ಯೆ ಹೇಗಾಯ್ತು?
ಆರೋಪಿ ರುದ್ರೇಶ ಶಿವಮೊಗ್ಗ ನಿವಾಸಿ. ಪ್ರಮುಖ ರಾಜಕೀಯ ಪಕ್ಷ ಹಾಗೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಬಿಕಾಂ ಪದವೀಧರನಾಗಿರುವ ಈತ ವಿಐಪಿಗಳೊಂದಿಗೆ ಫೋಟೋ ತೆಗೆಸಿಕೊಂಡು, ತಾನೂ ಗಣ್ಯರ ರೀತಿಯಲ್ಲೇ ಪೋಸ್ ನೀಡುತ್ತಿದ್ದ. ಆದರೆ ಇದಕ್ಕಾಗಿ ಆತನಿಗೆ ಕಾರು ಬೇಕಾಗಿತ್ತು. ಕಾರಿನ ಶೋಕಿಯೂ ಇತ್ತು. ಸೆಕೆಂಡ್ ಹ್ಯಾಂಡ್ ಕಾರನ್ನೂ ಖರೀದಿಗಾಗಿ ನೋಡಿದ್ದ. ಹೊಸ ಕಾರಿನ ಶೋಕಿ ಇದ್ದ ರುದ್ರೇಶ ತನ್ನ ಸ್ನೇಹಿತನ ಜತೆ ಇನ್ನೋವಾ ಕಾರನ್ನು ಕದಿಯಲು ಸಂಚು ರೂಪಿಸಿದ್ದ. ಗೋವಾಕ್ಕೆ ಹೋಗಿ ಪ್ರಶಾಂತ ನಾಯಕ್‌ರ ಇನ್ನೋವಾ ಕಾರನ್ನು ಬಾಡಿಗೆ ಪಡೆದಿದ್ದರು. ತಾವು ಪ್ರವಾಸಿಗಳೆಂದು ಹೇಳಿ ಶಿವಮೊಗ್ಗಕ್ಕೆ ಬಿಡಲು ರು. 6 ಸಾವಿರ ಬಾಡಿಗೆ ಮಾತನಾಡಿದ್ದರು. ರಾಣಿಬೆನ್ನೂರು ಬಳಿ ಬಂದಾಗ ರುದ್ರೇಶ ಹಾಗೂ ಆತನ ಸ್ನೇಹಿತ ಸೇರಿ ಟವೆಲ್‌ನಿಂದ ಚಾಲಕ ಪ್ರಶಾಂತ ನಾಯಕನ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಫಾರ್ಮ್ ಬಳಿ ಗುರುತು ಸಿಗದಂತೆ ಶವ ಬಿಸಾಕಿ ಇನ್ನೋವಾ ಕಾರಿನಲ್ಲಿ ಶಿವಮೊಗ್ಗಕ್ಕೆ ಪರಾರಿಯಾಗಿದ್ದರು.
ಪ್ರಶಾಂತ್ ಶವಕ್ಕಾಗಿ ಧರಣಿ
ಮಗನ ಶವ ನೀಡುವಂತೆ ಆಗ್ರಹಿಸಿ ಡಿ. 21ರಂದು ಪ್ರಶಾಂತ ನಾಯಕನ ಪೋಷಕರು ಜನಶಕ್ತಿ ವೇದಿಕೆಯ ಮಾಧವ ನಾಯಕ ನೇತೃತ್ವದಲ್ಲಿ ಹಾವೇರಿ ಎಸ್ಪಿ ಕಚೇರಿ ಎದುರು ಧರಣಿ ನಡೆಸಿದ್ದರು. ಮೂರು ತಿಂಗಳಾದರೂ ಕೊಲೆ ಮಾಡಿದವರನ್ನು ಬಂಧಿಸಿಲ್ಲ. ಮಗನ ಶವವನ್ನೂ ನೀಡುತ್ತಿಲ್ಲ ಎಂದು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement