ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರಕಾಶ ಕೋಳಿವಾಡಗೆ ಲೋಕಸಭೆ ಟಿಕೆಟ್ ನೀಡಲು ಮನವಿ

Vishwanath S
Updated On : 25 Dec 2013, 12:51 pm

ಹಾವೇರಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಕಾಶ ಕೋಳಿವಾಡ ಅವರಿಗೆ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ನಿಯೋಗ ತೆರಳಿ ಪಕ್ಷದ ಮುಖಂಡರಿಗೆ ಮನವಿ ಮಾಡಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಮರಿಯಮ್ಮನವರ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಲು ನಿಯೋಗ ತೆರಳಿ ಕೆಪಿಸಿಸಿ ಅಧ್ಯಕ್ಷ ಡಾ೤ ಜಿ. ಪರಮೇಶ್ವರ್, ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಹಾಗೂ ಸಚಿವ ಕೃಷ್ಣ ಬೈರೇಗೌಡಗೆ ಮನವಿ ಸಲ್ಲಿಸಲಾಗಿದೆ ಎಂದರು. ಇರ್ಫಾನ್ ದಿಡಗೂರು ಮಾತನಾಡಿ, ಅನೇಕ ವರ್ಷಗಳಿಂದ ಪಕ್ಷ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿತ್ತು. ಈ ಬಾರಿ ಬೇರೆ ಸಮಾಜದವರನ್ನು ಪರಿಗಣಿಸಿದಲ್ಲಿ ಕೋಳಿವಾಡ ಸಮರ್ಥ ಅಭ್ಯರ್ಥಿ.  ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಟಿಕೆಟ್ ನೀಡಿದರೆ ಗೆಲವು ಸುಲಭವಾಗಲಿದೆ. ಆದರೆ ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ರಾಜ್ಯ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಮೋಹಿದ್ದೀನ್ ಕಿಲ್ಲೇದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮೀರ್ ಪ್ಯಾಟಿ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ನಾಸೀರಖಾನ್ ಪಠಾಣ, ಬಸವರಾಜ ಸಾಲಿ, ಮುಕಬುಲ್ ಖಾನ್, ರಮೇಶಗೌಡ ಪಾಟೀಲ, ಕಿಶೋರ ಸಣ್ಣಮನಿ, ಇರ್ಫಾನ್ ಬಳ್ಳಾರಿ, ಶಿವಯೋಗಿ ಹಿರೇಮಠ, ವೆಂಕಟೇಶ ಕಟ್ಟಿಮನಿ, ಬಸವರಾಜ ಮಾಂಡ್ರೆ, ಕೆ.ಎಂ.ಪಿ. ಮಣಿ, ಗಂಗಾಧರ ಬಣಕಾರ ಇದ್ದರು.
ಜ. 13ಕ್ಕೆ ಚೌಡೇಶ್ವರಿ ಜಾತ್ರೆ
ರಾಣಿಬೆನ್ನೂರು: ರಾಣಿಬೆನ್ನೂರು ಗ್ರಾಮ ದೇವತೆ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರೋತ್ಸವ ಜ. 13ರಿಂದ 18ರ ವರೆಗೆ ನಡೆಯಲಿದೆ. ಜ. 13ರಂದು ಸಂಜೆ 6 ಗಂಟೆಯಿಂದ ನಗರದ ತಳವಾರ ಓಣಿಯಲ್ಲಿರುವ ದೇವಿಯ ಮನೆಯಿಂದ ಅಲಂಕೃತ ರಥದಲ್ಲಿ ಹೊರಡುವ ದೇವಿಯ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಸಾಗಲಿದೆ. ಜ. 14ರಂದು ಬೆಳಗ್ಗೆ ಮೆಡ್ಲೇರಿ ರಸ್ತೆಯಲ್ಲಿರುವ ಚೌಡೇಶ್ವರಿ ದೇವಸ್ಥಾನ ತಲುಪಿದ ಬಳಿಕ ಧಾರ್ಮಿಕ ಕಾರ್ಯಕ್ರಮಗಳು, ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಜ. 15ರಂದು ಓಕುಳಿ ಬೆಲ್ಲದ ಬಂಡಿ, ರಾತ್ರಿ ಭಜನೆ ಮತ್ತು ಎಲ್ಲಮ್ಮನ ಕಥಾ ಕಾರ್ಯಕ್ರಮ ನಡೆಯಲಿವೆ ಎಂದು ಜಾತ್ರೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯ ಮಾಸ್ಟರ್ ಅಥ್ಲೆಟಿಕ್: ಕೋಡಿಹಳ್ಳಿ ಸಾಧನೆ
ಹಾವೇರಿ: ನಗರದ ಹಿರಿಯ ಕ್ರೀಡಾಪಟು ಸಿ.ಎಸ್. ಕೋಡಿಹಳ್ಳಿ ಓಟದಲ್ಲಿ ಮತ್ತೊಮ್ಮೆ ಸಾಧನೆ ಮೆರೆದಿದ್ದಾರೆ. ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ. 21 ಹಾಗೂ 22ರಂದು ನಡೆದ ರಾಜ್ಯಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯರ 10 ಸಾವಿರ ಮೀಟರ್ ಓಟದಲ್ಲಿ ಕೋಡಿಹಳ್ಳಿ ಕಂಚಿನ ಪದಕ ಪಡೆದಿದ್ದಾರೆ. ಅಲ್ಲದೆ, 5 ಸಾವಿರ ಮೀ. ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಸಿ.ಎಸ್. ಕೋಡಿಹಳ್ಳಿ ಅವರ ಸಾಧನೆಯನ್ನು ನಗರಸಭಾ ಅಧ್ಯಕ್ಷ ಐ.ಯು. ಪಠಾಣ, ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಸದಸ್ಯರಾದ ಸುರೇಶ ದೊಡ್ಡಮನಿ, ಸಚಿನ ಡಂಬಳ, ರಮೇಶ ಕಡಕೋಳ, ಕರಬಸಪ್ಪ ಹಳದೂರ, ಐ.ಎ. ಜಮಾದಾರ ಶ್ಲಾಘಿಸಿದ್ದಾರೆ.
ಇಂದು ಅಟಲ್ ಜನ್ಮದಿನ
ಹಾವೇರಿ: ಮಾಜಿ ಪ್ರಧಾನಿ, ಅಭಿವೃದ್ಧಿಯ ಹರಿಕಾರ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಹುಟ್ಟುಹಬ್ಬವನ್ನು 'ಶಾಂತಿ ನಾಯಕನಿಗೆ ಯುವ ನಮನ' ಧ್ಯೇಯ ವಾಕ್ಯದೊಂದಿಗೆ ಡಿ. 25ರಂದು ಸಂಜೆ 6 ಗಂಟೆಗೆ ನಗರದ ಮುನ್ಸಿಪಲ್ ಮೈದಾನದಲ್ಲಿ ಆಚರಿಸಲು ಬಿಜೆಪಿ ಯುವ ಮೋರ್ಚಾ ನಿರ್ಧರಿಸಿದೆ. ನಗರ ಘಟಕದ ಅಧ್ಯಕ್ಷ ವೆಂಕಟೇಶ ದೈವಜ್ಞ ಅಧ್ಯಕ್ಷತೆ ವಹಿಸಲಿದ್ದು, ವಕ್ತಾರರಾಗಿ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ಉದ್ಘಾಟಕರಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರದೀಪ ಮುಳ್ಳೂರ ಆಗಮಿಸುವರು. ಆಯ್ದ ಬಡ ಹಾಗೂ ಶಿಕ್ಷಣ ವಂಚಿತ ಮಕ್ಕಳಿಗೆ ಶಾಲಾ ಸಾಮಗ್ರಿಗಳನ್ನು ನೀಡಲಾಗುವುದು ಎಂದು ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಇಮಾಮಸಾಬ್ ಹಿರೇಮುಗದೂರ ತಿಳಿಸಿದ್ದಾರೆ.
ಇಂದು ಕಬಡ್ಡಿ ಪಂದ್ಯಾವಳಿ
ಹಿರೇಕೆರೂರು: ಯಲವದಹಳ್ಳಿ ಗ್ರಾಮದಲ್ಲಿ ರಥೋತ್ಸವದ ಅಂಗವಾಗಿ ಜೈಹನುಮಾನ ಕಬಡ್ಡಿ ತಂಡ ಹಾಗೂ ಅಮೆಚೂರ್ ಕಬಡ್ಡಿ ಸಂಸ್ಥೆ ಹಾವೇರಿ ಆಶ್ರಯದಲ್ಲಿ ಡಿ. 25ರಂದು ಬೆಳಗ್ಗೆ 11 ಗಂಟೆಗೆ ಮುಕ್ತ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ ರು. 10,001, ದ್ವಿತೀಯ ರು. 7,001, ತೃತೀಯ ರು. 3001 ಹಾಗೂ ಟ್ರೋಫಿ ನೀಡಲಾಗುವುದು. ಉತ್ತಮ ತಂಡ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಉತ್ತಮ ಆಲ್‌ರೌಂಡರ್‌ಗೆ ತಲಾ ರು. 101 ನಗದು ಹಾಗೂ ಟ್ರೋಫಿ ನೀಡಲಾಗುವುದು. ರು. 200 ಪ್ರವೇಶಧನವಿದೆ. ವಿವರಗಳಿಗೆ ರುದ್ರಗೌಡ ಬ್ಯಾಡಗೌಡ್ರ, ಮೊ. 9742389636, ಗುಡ್ಡಪ್ಪ ಮಲ್ಲೇರ, ಮೊ. 9535572580, ಹಾಗೂ ಮಾಲತೇಶ ಜೋಗೇರ, ಮೊ. 8742387334 ಸಂಪರ್ಕಿಸಲು ಕೋರಲಾಗಿದೆ.
ಕಾರ್ಮಿಕರ ಪ್ರತಿಭಟನೆ
ಹಾನಗಲ್ಲ: ಕೃಷಿ ಕೂಲಿ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ. 27ರಂದು ಪಟ್ಟಣದಲ್ಲಿ ಆಲ್ ಇಂಡಿಯನ್ ಕಿಸಾನ್ ಸಭಾ ಹಾಗೂ ಭಾರತ ಕಮ್ಯುನಿಷ್ಟ್ ಪಕ್ಷ ಕೃಷಿ ಕೂಲಿ ಕಾರ್ಮಿಕರ ಮೆರವಣಿಗೆ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಿದೆ. ಮಧ್ಯಾಹ್ನ 12 ಗಂಟೆಗೆ ಕುಮಾರೇಶ್ವರ ವಿರಕ್ತಮಠದಿಂದ ಹೊರಡುವ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಹಸೀಲ್ದಾರ್‌ಗೆ ಮನವಿ ಅರ್ಪಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸಹದೇವಪ್ಪ ಕರಬಣ್ಣನವರ ಹಾಗೂ ಕಾರ್ಯದರ್ಶಿ ವಿಶ್ವನಾಥ ತುಪ್ಪದ ತಿಳಿಸಿದ್ದಾರೆ.
ಗುರುಬಸಮ್ಮ ನಿಧನ
ಹಾವೇರಿ: ಕೊರಡೂರ ಗ್ರಾಮದ ಗುರುಬಸಮ್ಮ ಶಿವಲಿಂಗಯ್ಯ ಕಿತ್ತೂರಮಠ (80) ಮಂಗಳವಾರ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಡಿ. 25ರಂದು ಬೆಳಗ್ಗೆ 11ಕ್ಕೆ ಸ್ವಗ್ರಾಮದಲ್ಲಿ ನೆರವೇರಲಿದೆ. ಇವರಿಗೆ ಲಡ್ಡುಮುತ್ಯಾ ಬೋರ್‌ವೆಲ್ ಕಂಪನಿಯ ಕುಮಾರಸ್ವಾಮಿ ಕಿತ್ತೂರಮಠ ಸೇರಿ ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement