ಶಿಕ್ಷಣದಿಂದ ಪ್ರಜಾಪ್ರಭುತ್ವ ಯಶಸ್ವಿ: ಭಜಂತ್ರಿ
ಹಾವೇರಿ: ಪ್ರಜಾಪ್ರಭುತ್ವದ ಯಶಸ್ಸು ಶೈಕ್ಷಣಿಕ ಚಟುವಟಿಕೆಯನ್ನು ಅವಲಂಬಿಸಿದೆ. ಇಂದಿನ ಮಕ್ಕಳೇ ನಾಳೆಯ ನಾಯಕರಾಗುವುದರಿಂದ ಶಾಲಾ ಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ಸಂಸತ್ತಿನ ಅರಿವು ಮೂಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಸಮೂಹ ಸಂಪನ್ಮೂಲ ಸಮನ್ವಯ ಅಧಿಕಾರಿ ಕೆ.ಎಫ್. ಭಜಂತ್ರಿ ಹೇಳಿದರು.
ನಗರ ಸರ್ಕಾರಿ ಪ್ರಾಥಮಿಕ ಶಾಲೆ ನಂ. 3ರಲ್ಲಿ ಸೋಮವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಯುವ ಸಂಸತ್ತು ಸ್ಪರ್ಧೆ ಉದ್ಘಾಟಿಸಿದ ಅವರು, ಮಕ್ಕಳಲ್ಲಿ ಉತ್ತಮ ವಾಕ್ಚಾತುರ್ಯ ಮೂಡಬೇಕಾದರೆ ಇಂತಹ ಸ್ಪರ್ಧೆಗಳು ಅಗತ್ಯ. ಈ ಮೂಲಕ ಮಕ್ಕಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರಲು ಸಹಾಯಕವಾಗುತ್ತದೆ. ಅಲ್ಲದೆ ಮಕ್ಕಳಲ್ಲಿ ವಿಷಯ ಸಂಗ್ರಹಣ ಮನೋಭಾವ ಬೆಳೆಸಬಹುದಾಗಿದೆ ಎಂದರು.
ತಾಲೂಕು ದೈಹಿಕ ಶಿಕ್ಷಣ ವಿಭಾಗದ ಅಧಿಕಾರಿ ಎನ್.ಐ. ಇಚ್ಚಂಗಿ ಮಾತನಾಡಿ, ಇಂಥ ಸ್ಫರ್ಧೆಗಳು ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವುದರ ಮೂಲಕ ಸರ್ಕಾರ ರಚನೆ, ಮಂತ್ರಿಗಳ ಮತ್ತು ಶಾಸಕರ ಕಾರ್ಯಗಳು ಏನು? ಸಂಸತ್ತು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಯಲು ಸಹಕಾರಿಯಾಗುತ್ತದೆ. ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ನೆರವಾಗುತ್ತದೆ ಎಂದರು.
ಯುವ ಸಂಸತ್ತು ಸ್ಪರ್ಧೆಯಲ್ಲಿ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಸೇರಿ 14 ಪ್ರೌಢಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು. ನೋಡಲ್ ಅಧಿಕಾರಿ ಕೆ.ಎಸ್. ನಾಗರಾಜ, ಹನುಮಂತಗೌಡ ಗೊಲ್ಲರ, ಗಣೇಶ, ಸುಶೀಲಾ ಸಿಂಧೆ ಇದ್ದರು. ನಾಗರಾಜ ಸ್ವಾಗತಿಸಿದರು.