ಓದುವ ಹವ್ಯಾಸದಿಂದ ಜ್ಞಾನ: ಮೂಲಿಮನಿ
ಶಿಗ್ಗಾಂವಿ: ಪುಸ್ತಕ ಓದುವ ಹವ್ಯಾಸ ಉಳ್ಳವರು ಶ್ರೇಷ್ಠ ಜ್ಞಾನಿಗಳಾಗಬಲ್ಲರು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಿ.ಪಿ. ಮೂಲಿಮನಿ ಅಭಿಪ್ರಾಯಪಟ್ಟರು.
ತಾಲೂಕಿನ ಮುಗಳಿ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರಕವಿ ಡಾ ಜಿ.ಎಸ್. ಶಿವರುದ್ರಪ್ಪ ಅವರ ಶ್ರದ್ಧಾಂಜಲಿ ಹಾಗೂ ಚನ್ನಬಸಮ್ಮ ಮತ್ತು ಮಲ್ಲಪ್ಪ ರಾಮಗಿರಿ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.
ಪುಸ್ತಕಗಳು ಮನುಷ್ಯನ ಉತ್ತಮ ಸ್ನೇಹಿತರು. ಪುಸ್ತಕಗಳೊಂದಿಗೆ ಒಡನಾಟ ಉಳ್ಳವರು ಚಿಂತನಶೀಲರಾಗಿರುತ್ತಾರೆ. ಆದರೆ, ಟಿವಿ ಸಂಸ್ಕೃತಿಯಿಂದ ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ. ಅವರಲ್ಲಿ ಓದುವ ಹವ್ಯಾಸ ಬೆಳೆಸುವುದು ಅವಶ್ಯವಿದೆ. ಗ್ರಂಥಾಲಯದೊಂದಿಗೆ ಸಂಪರ್ಕ ಮತ್ತು ಪುಸ್ತಕ ಖರೀದಿಸುವ ಮೂಲಕ ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಪಪೂ ಕಾಲೇಜಿನ ಉಪನ್ಯಾಸಕ ರಂಜಾನ್ ಕಿಲ್ಲೇದಾರ್ 'ಶರಣ ಸಾಹಿತ್ಯ ಮತ್ತು ಡಾ ಜಿ.ಎಸ್. ಶಿವರುದ್ರಪ್ಪ' ಕುರಿತು ದತ್ತಿ ಉಪನ್ಯಾಸ ನೀಡಿದರು. ತಾಲೂಕು ಕಸಾಪ ಅಧ್ಯಕ್ಷ ಬಸವರಾಜ ಬಸರೀಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿ ಮಲ್ಲಪ್ಪ ರಾಮಗಿರಿ ಮಾತನಾಡಿದರು. ಪತ್ರಕರ್ತ ಗೂಳಪ್ಪ ಅರಳಿಕಟ್ಟಿ ದತ್ತಿ ದಾನಿಗಳ ಪರಿಚಯ ಮಾಡಿಕೊಟ್ಟರು. ಕೆ.ಬಿ. ಚನ್ನಪ್ಪ, ಬಿಆರ್ಪಿ. ಟಿ.ಕೆ. ಭರಮಗೌಡ್ರ, ಎಸ್ಡಿಎಂಸಿ ಅಧ್ಯಕ್ಷ ಉಳವನಗೌಡ ಪಾಟೀಲ ಮಾತನಾಡಿದರು.
ಉಪನ್ಯಾಸಕ ಜಿ.ಎನ್. ಯಲಿಗಾರ, ಹಿರಿಯರಾದ ಗುರುಶಾಂತಪ್ಪ ರಾಮಗಿರಿ, ಚನ್ನಬಸಪ್ಪ ರಾಮಗಿರಿ, ರಾಮಣ್ಣ ಕಾಮನಹಳ್ಳಿ, ಶಿವಲಿಂಗಪ್ಪ ಕುನ್ನೂರ ಅವರನ್ನು ಸನ್ಮಾನಿಸಲಾಯಿತು. ಶುದ್ಧ ಕನ್ನಡ ಬರಹ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಗತಿಪರ ರೈತ ಗಂಗಣ್ಣ ಪಾಣಿಗಟ್ಟಿ, ಕಸಾಪ ಗೌರವ ಕಾರ್ಯದರ್ಶಿ ಮಹಾಂತೇಶ ಹಿತ್ತಲಮನಿ, ಸಿಆರ್ಪಿ ವಿ.ಜಿ. ದುಂಡಪ್ಪನವರ, ನಿವೃತ್ತ ಶಿಕ್ಷಕ ಬಿ.ಎಂ. ದುಂಡಪ್ಪನವರ, ಮುಖ್ಯ ಗುರು ಬಿ.ಬಿ. ಕಟ್ಟಿಮನಿ, ಶಿಕ್ಷಕ ಶಿವಕುಮಾರಸ್ವಾಮಿ, ಮಂಜುಳಾ ರಾಮಗಿರಿ, ಗ್ರಾಪಂ ಸದಸ್ಯೆ ಅನಸವ್ವ ಪುರದಣ್ಣವರ, ರೇಣವ್ವ ಬಿಶೆಟ್ಟಿ ಇದ್ದರು.
ಚಂದ್ರು ದುಂಡಪ್ಪನವರ ನಿರೂಪಿಸಿದರು. ಈಶ್ವರ ಕಾಲವಾಡ ಸ್ವಾಗತಿಸಿದರು. ಎಂ.ಎಸ್. ಬ್ಯಾಹಟ್ಟಿ ವಂದಿಸಿದರು.