ಜಿ.ಎಸ್. ಶಿವರುದ್ರಪ್ಪಗೆ ಸ್ವರಾಂಜಲಿ, ಶ್ರದ್ಧಾಂಜಲಿ
ಹಾನಗಲ್ಲ: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಮಂಥನ ವೇದಿಕೆ ಆಶ್ರಯದಲ್ಲಿ ಮಂಗಳವಾರ ಸಂಜೆ ಸ್ವರಾಂಜಲಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.
ವಿಶ್ರಾಂತ ಅಧ್ಯಾಪಕ ಎಚ್.ಎನ್. ಸವಣೂರು ನುಡಿ ನಮನ ಸಲ್ಲಿಸಿ, ಸಹೃದಯತೆಗೆ ಇನ್ನೊಂದು ಹೆಸರು ಜಿಎಸ್ಸೆಸ್. ಕಾವ್ಯ ಲೋಕ ಹಾಗೂ ಶೈಕ್ಷಣಿಕ ಸೇವೆಯಲ್ಲಿ ಅವರು ಒಂದು ಮಾದರಿ. ಯಾವುದೇ ಪಂಥಗಳಿಗೆ ಹಣೆಪಟ್ಟಿಯಾಗದೆ ಕನ್ನಡದ ಸಿರಿಗೆ ಭವ್ಯ ಗರಿಯಾದ ಕವಿ ಎಂದರು.
ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ ಮಾತನಾಡಿ, ಸಮನ್ವಯದ ಶ್ರೀಮಂತಿಕೆ, ಅದಮ್ಯ ಸಾಮಾಜಿಕ ಕಳಕಳಿಯ ಜಿಎಸ್ಸೆಸ್ ಕನ್ನಡ ಸಾರಸ್ವತ ಲೋಕದ ಉದಾತ್ತ ಕವಿ ಶ್ರೇಷ್ಠ. ಕನ್ನಡ ಕಾಳಜಿಯ ಮೇರು ವ್ಯಕ್ತಿತ್ವ ಎಂದರು.
ಮಂಥನ ವೇದಿಕೆ ಸಂಚಾಲಕ ಉದಯ ನಾಸಿಕ, ಕೆ.ಎಲ್. ದೇಶಪಾಂಡೆ, ಶ್ರೀನಿವಾಸ ಕಲ್ಲಾಪುರ, ಗಿರೀಶ ದೇಶಪಾಂಡೆ, ಪ್ರಶಾಂತ ಮುಚ್ಚಂಡಿ, ಗೋಪಾಲಾಚಾರ್ ಬಡಿಗೇರ, ಶ್ರೀನಿವಾಸಮೂರ್ತಿ ಕುಲಕರ್ಣಿ, ಸ್ನೇಹಾ ನಾಸಿಕ, ಪೂರ್ಣಿಮಾ ಹರಿಕಾರ, ವಿಜಯಾ ಕಲ್ಲಾಪುರ, ಸುಜಾತಾ ಕರಗುದರಿ ಇದ್ದರು.
ಸ್ವರಾಂಜಲಿ: ಜಿಎಸ್ಸೆಸ್ ಬರೆದ ಎಲ್ಲೋ ದೂರದಿ ಜಿನುಗುವ ಹನಿಗಳೇ ಬನ್ನಿ ಬನ್ನಿ ಹೂಮಳೆಯಾಗಿ, ಸ್ತ್ರೀ ಎಂದರೆ ಅಷ್ಟೇ ಸಾಕೆ ನಿನಗೆ ಬೇರೆ ಹೆಸರು ಬೇಕೆ, ಎಲ್ಲೋ ಹುಡುಕಿದೆ ಇಲ್ಲದ ದೇವರ, ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ, ಎದೆ ತುಂಬಿ ಹಾಡಿದೆನು, ಮುಗಿಯಿತೇನು ಋಣ ಕವನಗಳಿಗೆ ಸಂಗೀತ ಕಲಾವಿದರಾದ ನರಸಿಂಹ ಕೋಮಾರ, ಅಂಬಿಕಾ ಅಕ್ಕಿವಳ್ಳಿ, ನಿಧಿ ಅಡಿಗ, ಶ್ರೀಪಾದ ಅಕ್ಕಿವಳ್ಳಿ, ಪ್ರಸಾದ ಕೋಮಾರ, ನಿರಂಜನ ಅಡಿಗ, ಶಾಂತೇಶ ಕರಗುದರಿ, ರವಿ ಲಕ್ಷ್ಮೇಶ್ವರ ಧ್ವನಿಯಾಗಿ, ಸ್ವರಶ್ರದ್ಧಾಂಜಲಿ ಅರ್ಪಿಸಿದರು.
ಬದುಕಿನ ಪ್ರೀತಿ ಕಲಿಸಿದ ರಾಷ್ಟ್ರಕವಿ
ಶಿಗ್ಗಾಂವಿ: ತಮ್ಮ ಕಾವ್ಯದುದ್ದಕ್ಕೂ ಜೀವನ ಪ್ರೀತಿಯನ್ನು ಎದೆ ತುಂಬಿ ಹಾಡಿದ ಡಾ ಜಿ.ಎಸ್. ಶಿವರುದ್ರಪ್ಪನವರು ಬದುಕಿನ ಪ್ರೀತಿಯನ್ನು ಕಲಿಸಿಕೊಟ್ಟ ಅನನ್ಯ ರಾಷ್ಟ್ರಕವಿ ಎಂದು ಶಿಗ್ಗಾಂವಿಯ ಚನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಹೇಳಿದರು. ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನವೋದಯ ಹಾಗೂ ನವ್ಯ ಕಾವ್ಯ ಪಂಥಗಳೆರಡನ್ನು ಮೈಗೂಡಿಸಿಕೊಂಡು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಮನ್ವಯದ ಕವಿ ಡಾ. ಜಿಎಸ್ಸೆಸ್ ಎಂದು ಅಭಿಪ್ರಾಯಪಟ್ಟರು.
ನಳಂದಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಂ.ಬಿ. ಹಳೇಮನಿ ಮಾತನಾಡಿ, ವೈಚಾರಿಕ ನಿಲುವನ್ನು ಹೊಂದಿದ ರಾಷ್ಟ್ರಕವಿ ಜಿಎಸ್ಸೆಸ್ ಕುವೆಂಪು ಮಾದರಿಯಲ್ಲಿ ನಡೆದರು. ಅವರಿಗಿಂತ ಭಿನ್ನವಾದ ದಾರಿಯೊಂದನ್ನು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮೂಡಿಸಿದ್ದಾರೆ ಎಂದು ಹೇಳಿದರು.
ಚನ್ನಬಸವೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ ನಿರ್ದೇಶಕ ಎಚ್.ಎಸ್. ಹಲಸೂರ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ. ರಾಮು ಮೂಲಗಿ, ಚನ್ನಪ್ಪ ಕುನ್ನೂರ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಸಿ.ಟಿ. ಪಾಟೀಲ, ರವಿ ಮಹಾಂತಶೆಟ್ಟರ, ರಾಜೇಶ ಸಂಶಿ, ಚಂದ್ರು ಹರವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಲ್. ಹೊಳಲಾಪುರ, ಬಿ.ಐ. ಅಂಗಡಿ, ಕೊಟ್ರೇಶ ಮಾಸ್ತರ ಬೆಳಗಲಿ ಹಾಗೂ ಬಸವ ಸಮಿತಿಯ ಶಿವ ಶಂಕರ ಅಕ್ಕಿ ಇದ್ದರು.