ತಲೆಯ ಮೇಲೆ ಸಾವಿನ ಟ್ಯಾಂಕ್!
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 25
ನೀರು ಯಾವಾಗ ಬರುತ್ತದೆ ಎಂದು ಕಾಯುವ ಜನರ ಕಷ್ಟ ಒಂದೆಡೆಯಾದರೆ, ನೀರು ಬಿಟ್ಟರೆ ಜೀವಭಯದಿಂದ ಆತಂಕ ಎದುರಿಸುವ ಜನತೆ ಮತ್ತೊಂದು ಕಡೆ.
ಇದು ನಗರಸಭೆ 21ನೇ ವಾರ್ಡಿನ ದೇಸಾಯಿ ಗಲ್ಲಿ ರಾಮದೇವರ ಗುಡಿ ಬಳಿಯಿರುವ ಓವರ್ ಹೆಡ್ ಟ್ಯಾಂಕ್ನಿಂದ ಆಗುತ್ತಿರುವ ಸಮಸ್ಯೆ. ಸುಮಾರು 10 ಸಾವಿರ ಲೀಟರ್ ಸಂಗ್ರಹಣಾ ಸಾಮರ್ಥ್ಯವಿರುವ ಈ ಟ್ಯಾಂಕ್ ಈಗ ಸುತ್ತಲಿನ ನಿವಾಸಿಗಳ ನಿದ್ದೆಗೆಡಿಸಿದೆ. ಟ್ಯಾಂಕ್ನಲ್ಲಿ ನೀರು ಬಿದ್ದರೆ ಸಾಕು, ಅಲ್ಲಲ್ಲಿ ಬಿರುಕು ಬಿಟ್ಟಿರುವ ಸಂದಿಗಳಿಂದ ಜಲಪಾತದಂತೆ ನೀರು ಸೋರುತ್ತದೆ. ಶಿಥಿಲಗೊಂಡಿರುವ ಟ್ಯಾಂಕ್ನಿಂದ ಸಿಮೆಂಟ್ ಚೂರುಗಳು ಆಗಾಗ ಬೀಳುತ್ತಿರುತ್ತವೆ. ರಸ್ತೆಯಲ್ಲೇ ಟ್ಯಾಂಕ್ ಇದ್ದು, ಮಕ್ಕಳು, ಮಹಿಳೆಯರು ಅದೇ ದಾರಿಯಲ್ಲಿ ಓಡಾಡುತ್ತಿರುತ್ತಾರೆ. ಯಾವಾಗ ಟ್ಯಾಂಕ್ ಕುಸಿದು ಬೀಳುತ್ತದೋ ಎಂಬ ಹೆದರಿಕೆಯಲ್ಲೇ ಸ್ಥಳೀಯರು ಬದುಕುತ್ತಿದ್ದಾರೆ.
ಸಂಪೂರ್ಣ ಶಿಥಿಲ: ಈ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಿ 20 ವರ್ಷಗಳಷ್ಟೇ ಕಳೆದಿವೆ. ಕಳಪೆ ಕಾಮಗಾರಿಯಿಂದಾಗಿ ಟ್ಯಾಂಕ್ಗೆ ಆಧಾರವಾಗಿ ನಿಲ್ಲಿಸಿರುವ ಕಂಬಗಳು ಹಾಗೂ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದ್ದು, ಸುತ್ತಲೂ ನೀರು ಸೋರಿಕೆಯಾಗುತ್ತದೆ. ತಳದಲ್ಲೇ ಹತ್ತಾರು ಮನೆಗಳಿದ್ದು, ಆ ಮನೆಗಳ ಮೇಲೆ ಸಿಮೆಂಟ್ ಚೂರುಗಳು ಬೀಳುತ್ತಲೇ ಇರುತ್ತವೆ. ಕೆಲವರ ತಲೆ ಮೇಲೂ ಟ್ಯಾಂಕ್ನಿಂದ ದೊಡ್ಡ ಗಾತ್ರದ ಸಿಮೆಂಟ್ ಚೂರುಗಳು ಬಿದ್ದ ಉದಾಹರಣೆಗಳಿವೆ. ವಾರಕ್ಕೊಮ್ಮೆ ಈ ಟ್ಯಾಂಕ್ಗೆ ನೀರು ಏರಿಸಿ ಸುತ್ತಮುತ್ತಲಿನ ವಾರ್ಡ್ಗಳಿಗೆ ನೀರು ಪೂರೈಕೆಯಾಗುತ್ತದೆ. ನೀರು ಬಿಟ್ಟಾಗಲೆಲ್ಲ ಸ್ಥಳೀಯರ ಆತಂಕ ಹೆಚ್ಚಾಗುತ್ತದೆ.
ಸ್ಪಂದಿಸದ ನಗರಸಭೆ: ಮೂರ್ನಾಲ್ಕು ವರ್ಷಗಳಿಂದ ಟ್ಯಾಂಕ್ನಿಂದ ನೀರು ಸೋರಿಕೆ ಹೆಚ್ಚಾಗಿದೆ. ಆದರೂ ಶಿಥಿಲಗೊಂಡ ಟ್ಯಾಂಕ್ಗೆ ನೀರು ಬಿಟ್ಟು ವಾರ್ಡ್ ಸಂಖ್ಯೆ 21, 22, 29, 30, 31 ಮುಂತಾದವುಗಳಿಗೆ ನಗರಸಭೆ ನೀರು ಪೂರೈಸುತ್ತಿದೆ. ಟ್ಯಾಂಕ್ ಶಿಥಿಲಗೊಂಡ ಬಗ್ಗೆ ಸ್ಥಳೀಯರು ಅನೇಕ ಬಾರಿ ಪುರಪಿತೃಗಳಿಗೆ, ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಂದು ಟ್ಯಾಂಕ್ ನೋಡಿ ಹೋಗುತ್ತಿದ್ದಾರೆಯೇ ಹೊರತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರಾದ ಮೃತ್ಯುಂಜಯ ತಿಪ್ಪಶೆಟ್ಟಿ, ಜಗದೀಶ ಚೌಟಗಿ, ಶಿವಬಸಪ್ಪ ಡೊಳ್ಳಿನ, ಬಸವರಾಜ ಡೊಳ್ಳಿನ, ಶಿವಯೋಗಿ ಹೂಗಾರ, ಮುತ್ತು ಕೊಪ್ಪರ, ಅಶೋಕ ರಜಪೂತ್ ಇತರರು ದೂರುತ್ತಾರೆ. ಇಲ್ಲಿ ವಾಸಿಸಲು ಹೆದರಿಕೆಯಾಗುತ್ತಿದ್ದು, ಟ್ಯಾಂಕ್ ಒಡೆದು ತೆರವು ಮಾಡಬೇಕು ಎಂದು ಆಗ್ರಹಿಸುತ್ತಾರೆ.
ತೆರವು ಇಲ್ಲವೇ ದುರಸ್ತಿ: ಪಠಾಣ
ಈ ಕುರಿತು ನಗರಸಭೆ ಅಧ್ಯಕ್ಷ ಐ.ಯು. ಪಠಾಣ ಅವರನ್ನು ಕೇಳಿದಾಗ, ಟ್ಯಾಂಕ್ನಿಂದ ನೀರು ಸೋರುತ್ತಿರುವುದು ಗಮನಕ್ಕೆ ಬಂದಿದೆ. ನೀರು ಸರಬರಾಜು ಮಂಡಳಿ ತಾಂತ್ರಿಕ ಅಧಿಕಾರಿಗಳಿಗೆ ಪತ್ರ ಬರೆದು ವರದಿ ನೀಡುವಂತೆ ಕೇಳಿದ್ದೇನೆ. ಅವರು ಪರಿಶೀಲಿಸಿ ವರದಿ ನೀಡಿದ ತಕ್ಷಣ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಅಗತ್ಯವಿದ್ದರೆ ಒಡೆದು ತೆರವುಗೊಳಿಸಲಾಗುವುದು. ಇಲ್ಲದಿದ್ದರೆ ಸೂಕ್ತ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
-ನಾರಾಯಣ ಹೆಗಡೆ