ವಾಜಪೇಯಿಗೆ ಭಾರತರತ್ನ ನೀಡಿ: ಮುರಿಗೆಪ್ಪ
ಬ್ಯಾಡಗಿ: ವಲ್ಲಭಭಾಯಿ ಪಟೇಲರನ್ನು ಈಗ ನೆನಪಿಸಿಕೊಳ್ಳಲಾಗುತ್ತಿದೆ. ರಾಷ್ಟ್ರನಾಯಕರನ್ನು ಮರೆತರೆ ದೇಶಕ್ಕೆ ಭವಿಷ್ಯವಿಲ್ಲ. ಮುತ್ಸದ್ದಿ, ಅಭಿವೃದ್ಧಿ ಹರಿಕಾರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತರತ್ನ ನೀಡುವಂತೆ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಆಗ್ರಹಿಸಿದರು.
ಮುಪ್ಪಿನೇಶ್ವರ ಮಠದಲ್ಲಿ ಬುಧವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ವಾಜಪೇಯಿ ಅವರ 90ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ವಾಜಪೇಯಿ ಪ್ರಶ್ನಾತೀತ ನಾಯಕ. ಅವರ ವಿಚಾರಗಳು ಎಲ್ಲರಿಗೂ, ಎಲ್ಲ ಕಾಲಕ್ಕೂ ಪ್ರಸ್ತುತ. ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಕೆಲಸ ಮಾಡಿದ್ದರಿಂದ ದೇಶ ಇಂದು ಪ್ರಗತಿ ಪಥದಲ್ಲಿ ಸಾಗುವಂತಾಗಿದೆ ಎಂದರು.
ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದ ವಾಜಪೇಯಿ, ಅಲ್ಪಮತದ ಸರ್ಕಾರ ನಡೆಸಿದರು. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟರು. ಚತುಷ್ಪಥ ರಸ್ತೆ ನಿರ್ಮಾಣ, ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿ ಮಾಡಿದರೆಂದು ಶ್ಲಾಘಿಸಿದರು.
ಆದರೆ, ಉತ್ತರದ ನದಿಗಳನ್ನು ದಕ್ಷಿಣದ ನದಿಗಳಿಗೆ ಜೋಡಿಸುವ ಅವರ ಕನಸು ಇಂದಿಗೂ ನನಸಾಗಿಲ್ಲ. ಅಲ್ಲದೆ, ಈಗ ಅಸಮರ್ಥ ನಾಯಕರಿಂದ ದೇಶ ಸಮಸ್ಯೆ ಎದುರಿಸಬೇಕಾಗಿದೆ. ಹತ್ತು ವರ್ಷಗಳಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದರು.
ಎಪಿಎಂಸಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ, ರೈತ ಹೋರಾಟ ಸಮಿತಿ ಅಧ್ಯಕ್ಷ ಹುನುಮಂತಪ್ಪ ಮಾಗೋಡ, ಪುರಸಭೆ ಸದಸ್ಯರಾದ ನಾರಾಯಣಪ್ಪ ಕರ್ನೂಲ, ರಾಮಣ್ಣ ಕೋಡಿಹಳ್ಳಿ, ಪ್ರಶಾಂತ ಯಾದವಾಡ, ಡಾ, ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ಮಂಜುನಾಥ ಶಿರವಾಡಕರ, ಶಶಿಧರಸ್ವಾಮಿ ಗೊಲ್ಲರಹಳ್ಳಿಮಠ ಉಪಸ್ಥಿತರಿದ್ದರು.