ಶಿಕ್ಷಣಕ್ಕೆ ಶೇ. 30 ಹಣ ಮೀಸಲಿಡಿ: ದೇಸಾಯಿ
ಶಿಗ್ಗಾಂವಿ: ಸರ್ಕಾರ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ. 30ರಷ್ಟು ಅನುದಾನ ಮೀಸಲಿಡಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗುರುರಾಜ ದೇಸಾಯಿ ಒತ್ತಾಯಿಸಿದರು.
ಪಟ್ಟಣದ ಶರೀಫ ಶಿವಯೋಗಿ ಭವನದಲ್ಲಿ ಮಂಗಳವಾರ ನಡೆದ ಎಸ್ಎಫ್ಐ 2ನೇ ತಾಲೂಕು ಸಮ್ಮೇಳನ ಉದ್ಘಾಟಿಸಿದ ಅವರು, ಸರ್ಕಾರ ಪ್ರತಿವರ್ಷ ತನ್ನ ಬಜೆಟ್ನಲ್ಲಿ ಶಿಕ್ಷಣಕ್ಕೆ ಕೇವಲ ಶೇ. 14ರಷ್ಟು ಹಣ ಮೀಸಲಿಡುತ್ತಿದೆ. ಇದರಿಂದ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಅಸಾಧ್ಯ. ಇಂದಿಗೂ ಸರ್ಕಾರಿ ಶಾಲೆಗಳು ಮೂಲಭೂತ ಸಮಸ್ಯೆಗಳಿಂದ ನರಳುತ್ತಿವೆ. ಸಮರ್ಪಕ ಬಸ್ ಸೌಕರ್ಯವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಹಾಸ್ಟೆಲ್ಗಳು ರೋಗಗ್ರಸ್ತ ಆಗುತ್ತಿದ್ದು, ಅಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಸಿಗದೆ ರಕ್ತಹೀನತೆಯಿಂದ ಬಳಲುವಂತಾಗಿದೆ. ಸರ್ಕಾರ ಜೈಲಿನಲ್ಲಿರುವ ಕೈದಿಗಳ ನಿತ್ಯದ ಆಹಾರಕ್ಕೆ ರು. 125 ಖರ್ಚು ಮಾಡುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಕೇವಲ ರು. 25 ನೀಡುತ್ತಿದೆ. ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರವಿಡಲು ಶುಲ್ಕ ಹೆಚ್ಚಳದಂತಹ ತಂತ್ರ ಪ್ರಯೋಗಿಸುತ್ತಿರುವ ಸರ್ಕಾರ ಖಾಸಗಿ ಶಾಲೆಗಳ ರಕ್ಷಣೆಯೇ ನಮ್ಮ ಗುರಿ ಎಂದುಕೊಂಡಿದೆ ಎಂದು ಆರೋಪಿಸಿದರು.
ಪ್ರಗತಿಪರ ಚಿಂತಕ ಬಿ.ಎಸ್. ಸೊಪ್ಪಿನ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಿನಯ ಹುರಳಿಕುಪ್ಪಿ, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಹಾರ, ಮುಖಂಡ ಮಲ್ಲೇಶ ಗೋಟನವರ ಮಾತನಾಡಿದರು.
ಎಸ್ಎಫ್ಐ ತಾಲೂಕು ಅಧ್ಯಕ್ಷ ಸುಭಾಸ ಮಾದರ ಅಧ್ಯಕ್ಷತೆ ವಹಿಸಿ, ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು. ಗೌರವಾಧ್ಯಕ್ಷ ಸಿ.ಡಿ. ಯತ್ನಳ್ಳಿ, ಜಿಲ್ಲಾ ಎಸ್ಎಫ್ಐ ಅಧ್ಯಕ್ಷ ಬಸವರಾಜ ಪೂಜಾರ, ಅರುಣ ಹುಡೇದಗೌಡ್ರ, ಪ್ರಕಾಶ ಔಂದಕರ ಇದ್ದರು. ಜ್ಯೋತಿ ದೊಡ್ಮನಿ ಕಾರ್ಯಕ್ರಮ ನಿರ್ವಹಿಸಿದರು.