ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಆಸ್ಪತ್ರೆ ಸಮಸ್ಯೆ ಬಗೆಹರಿಸಿ: ಪ್ರತಿಭಟನೆ

Vishwanath S
Updated On : 28 Dec 2013, 11:15 am

ಹಾವೇರಿ: ತಾಲೂಕಿನ ಕರ್ಜಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಶುಕ್ರವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕರ್ಜಗಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರಾಮದ ಜನರಿಗೆ ಅಗತ್ಯ ಆರೋಗ್ಯ ಸೇವೆ ನೀಡುವಲ್ಲಿ ವಿಫಲವಾಗಿದೆ. ದಿನನಿತ್ಯ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತಾಗಿದೆ. ಪ್ರಾಥಮಿಕ ಕೇಂದ್ರದಲ್ಲಿ ವೈದ್ಯರಿಗೆ ಹಣ ನೀಡಿದ ರೋಗಿಗಳಿಗೆ ಮಾತ್ರ ಉತ್ತಮವಾದ ಚಿಕಿತ್ಸೆ ಸಿಗುತ್ತದೆ. ಗರ್ಭಿಣಿಯರನ್ನು ಸರಿಯಾಗಿ ಉಪಚರಿಸದೆ 'ಜಿಲ್ಲಾಸ್ಪತ್ರೆಗೆ ಹೋಗಿ' ಎಂದು ನಿರ್ಲಕ್ಷ್ಯದಿಂದ ಹೇಳುತ್ತಾರೆ. ಆರೋಗ್ಯ ಕೇಂದ್ರದಲ್ಲಿ ಮಹಿಳಾ ಆರೋಗ್ಯ ಸಹಾಯಕಿ ನೇಮಕ ಮಾಡಿಲ್ಲ. ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು.
ಸಣ್ಣಪುಟ್ಟ ಆರೋಗ್ಯ ಸೇವಗೂ ಜಿಲ್ಲಾಸ್ಪತ್ರೆಗೆ ಹೋಗುವಂತೆ ಸಿಬ್ಬಂದಿ ಪುಕ್ಕಟೆ ಸಲಹೆ ನೀಡುತ್ತಿದ್ದಾರೆ. ಸಹಜ ಹೆರಿಗೆಯನ್ನು ಕರ್ಜಗಿ ಆರೋಗ್ಯ ಕೇಂದ್ರದಲ್ಲೇ ಮಾಡಿಸುವಂತೆ ಸೌಲಭ್ಯ ಕಲ್ಪಿಸಬೇಕು. ದಿನದ 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಸೇವೆ ದೊರೆಯಬೇಕು. ಗ್ರಾಮದ ಜನಸಂಖ್ಯೆ 12 ಸಾವಿರಕ್ಕೂ ಹೆಚ್ಚಿದ್ದು, ಆಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ಕುಡಿವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು
ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿ ಜನರಿಗೆ ಉತ್ತಮ ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕರ್ಜಗಿ ಗ್ರಾಪಂ ಸದಸ್ಯ ನಾರಾಯಣ ಕಾಳೆ, ಕೊಟ್ರೇಶ ಗುಳೇದ, ಮೆಹಬೂಬಲಿ ಮದರಂಗಿ, ಶಂಭು ಬಿದರಗಡ್ಡಿ, ಮಾನಪ್ಪ ಹಿತ್ತಲಮನಿ, ಬಸವರಾಜ ಅಂಬಲಿ, ಬಾಬು ಹುಲಗೂರ, ರೇಖಾ ಗಂಗಮ್ಮನವರ, ನೀಲಮ್ಮ ಅಂಬಿಗೇರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement