ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

Vishwanath S
Updated On : 28 Dec 2013, 11:16 am

ಹಾವೇರಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 129ನೇ ಸಂಸ್ಥಾಪನಾ ದಿನಾಚರಣೆ ಡಿ. 28ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜರುಗಲಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಹರ ಎಚ್. ತಹಶೀಲ್ದಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಕೆ.ಬಿ. ಕೋಳಿವಾಡ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಮಾಜಿ ಶಾಸಕರಾದ ಬಿ.ಸಿ. ಪಾಟೀಲ್, ಡಾ೤ ಎಚ್.ಡಿ. ಲಮಾಣಿ, ಅಜ್ಜಂಪೀರ ಖಾದ್ರಿ ಆಗಮಿಸುವರೆಂದು ಮಾಧ್ಯಮ ವಿಭಾಗದ ಜಿಲ್ಲಾ ಸಂಚಾಲಕ ಶಿವಯೋಗಿ ಹಿರೇಮಠ ತಿಳಿಸಿದ್ದಾರೆ.
ನಾಳೆ ಆದಿಜಾಂಬವರ ಸಭೆ
ರಾಣಿಬೆನ್ನೂರು: ಹಾವೇರಿ ನಗರದಲ್ಲಿ 2014ರ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ರಾಜ್ಯ ಆದಿಜಾಂಬವ (ಮಾದಿಗ) ಸಂಘದ ರಾಜ್ಯ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿ. 29ರಂದು ಹಾವೇರಿ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಸಮಾಜ ಬಾಂಧವರ ಸಭೆ ಕರೆಯಲಾಗಿದೆ. ಸಮಾಜದ ಮುಖಂಡರು, ಆಗಮಿಸಿ ಸಲಹೆ-ಸೂಚನೆ ನೀಡುವಂತೆ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಮೈಲಪ್ಪ ಗೋಣಿಬಸಮ್ಮನವರ ತಿಳಿಸಿದ್ದಾರೆ.
ಪತಿ ನಾಪತ್ತೆ: ಪತ್ನಿ ದೂರು
ಶಿಗ್ಗಾಂವಿ: ತಾಲೂಕಿನ ಕುಂದೂರ ಗ್ರಾಮದ ರಮೇಶ ಕುರವತ್ತೆಪ್ಪ ಹರವಿ (35) ಸಂತೆ ಮಾಡಿಕೊಂಡು ಬರುವುದಾಗಿ ಹೇಳಿ ಡಿ. 19ರಂದು ಬಂಕಾಪುರಕ್ಕೆ ಹೋದವನು ವಾಪಸಾಗಿಲ್ಲ ಎಂದು ಆತನ ಪತ್ನಿ ಲಕ್ಷ್ಮವ್ವ ಹರವಿ ಬಂಕಾಪುರ ಠಾಣೆಯಲ್ಲಿ ದೂರು ನೀಡಿದ್ದಾಳೆ. ಎಲ್ಲೆಡೆ ಹುಡುಕಾಡಿದರೂ ಪತಿಯ ಪತ್ತೆಯಾಗಿಲ್ಲ. ಹುಡುಕಿ ಕೊಡಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾಳೆ. ಕಾಣೆಯಾದ ರಮೇಶ 5 ಅಡಿ 6 ಇಂಚು ಎತ್ತರವಿದ್ದು, ಗೋದಿ ಮೈಬಣ್ಣ, ಗುಂಗುರು ಕೂದಲು ಹೊಂದಿದ್ದಾನೆ. ಮನೆಯಿಂದ ಹೋಗುವಾಗ ಹಸಿರು ಚಕ್ಸ್ ಲುಂಗಿ, ಕೆಂಪು ಟೀ-ಶರ್ಟ್ ಧರಿಸಿದ್ದಾನೆ. ಶುದ್ಧ ಕನ್ನಡ ಮಾತನಾಡುತ್ತಾನೆ. ಸುಳಿವು ಸಿಕ್ಕಲ್ಲಿ ಬಂಕಾಪುರ ಪೊಲೀಸ್ ಠಾಣೆ (ದೂ. 08378-255633), ಜಿಲ್ಲಾ ಕಂಟ್ರೋಲ್ ರೂಂ (ದೂ. 08375-237368) ಸಂಪರ್ಕಿಸುವಂತೆ ಕೋರಿದ್ದಾರೆ.
ಮಹಿಳೆ ನಾಪತ್ತೆ: ದೂರು
ಹಾವೇರಿ: ನಗರದ ಇಜಾರಿ ಲಕ್ಮಾಪುರ ನಿವಾಸಿ ಶಹಿನಾಸುಲ್ತಾನ ರಜಾಕನವರ ಜೂ. 4ರಂದು ಮನೆಯಿಂದ ಹೋದವರು ಈವರೆಗೆ ವಾಪಸ್ ಬಂದಿಲ್ಲ ಎಂದು ಆಕೆಯ ಪತಿ ಮಹಮದ್ ರಜಾಕ್ ಪೊಲೀಸರಿಗೆ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ಮಹಿಳೆ 30 ವರ್ಷದವರಾಗಿದ್ದು, 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ನೀಳ ಕೂದಲು, ಗೋದಿ ಮೈಬಣ್ಣ, ದುಂಡನೆಯ ಮುಖ ಹೊಂದಿದ್ದಾರೆ. ಮಹಿಳೆ ಪತ್ತೆಗೆ ಸಹಕರಿಸುವಂತೆ ಪ್ರಕರಣ ದಾಖಲಿಸಿರುವ ಶಹರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.
ಹೈನುಗಾರಿಕೆ ತರಬೇತಿ
ಹಾವೇರಿ: ಧಾರವಾಡ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಜ. 6ರಿಂದ 11ರ ವರೆಗೆ ರೈತ ಹಾಗೂ ರೈತ ಮಹಿಳೆಯರಿಗಾಗಿ ಹೈನುಗಾರಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ರೈತರು, ರೈತ ಮಹಿಳೆಯರು ತರಬೇತಿಗೆ ಆಗಮಿಸುವಾಗ ಮತದಾರರ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್ ಹಾಗೂ ಪರಿಶಿಷ್ಟ ಜಾತಿ, ಪಂಗಡದವರಾದಲ್ಲಿ ಜಾತಿ ಪ್ರಮಾಣಪತ್ರ ತರಬೇಕೆಂದು ಧಾರವಾಡ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕರು ತಿಳಿಸಿದ್ದಾರೆ. ಮಾಹಿತಿಗಾಗಿ ಡಾ೤ ಜೇಂದಿ ವೈ.ಆರ್. (ಮೊ. 9844834926) ಸಂಪರ್ಕಿಸಬಹುದು.
ಉಚಿತ ತರಬೇತಿ
ಹಾವೇರಿ: ಹಾವೇರಿ ಜಿಲ್ಲಾಡಳಿತ ಭವನ ಸಂಕೀರ್ಣದ ಹಿಂಭಾಗದಲ್ಲಿರುವ ವಿಜಯಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ 30 ದಿನಗಳ ಮೊಬೈಲ್ ರಿಪೇರಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ತರಬೇತಿ ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಡಿ. 30ರಿಂದ ಆರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಡಿ. 30ರೊಳಗಾಗಿ ತಮ್ಮ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ. 08375-249160 ಅಥವಾ ಮೊ. 8762721574 ಸಂಪರ್ಕಿಸಲು ವೆಬ್‌ಸಿಟಿ ನಿರ್ದೇಶಕರು ತಿಳಿಸಿದ್ದಾರೆ.
ಬಸವಣ್ಣೆವ್ವ ನಿಧನ
ಹಾವೇರಿ: ತಾಲೂಕಿನ ತೋಟದ ಯಲ್ಲಾಪುರ ಗ್ರಾಮದ ಬಸವಣ್ಣೆವ್ವ ಬಸಪ್ಪ ಬೊಮ್ಮಣ್ಣನವರ (73) ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ ಐವರು ಪುತ್ರರು, ನಾಲ್ವರು ಪುತ್ರಿಯರು ಇದ್ದರು. ಶುಕ್ರವಾರ ಸ್ವಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ಜರುಗಿತು.
ರಾಜ್ಯ ಕಬಡ್ಡಿ ತಂಡಕ್ಕೆ ಭೀಮು ಇಟಗಿ ಆಯ್ಕೆ
ಬ್ಯಾಡಗಿ: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಉದಯೋನ್ಮುಖ ಆಟಗಾರ್ತಿ ಭೀಮು ಇಟಗಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ 30 ದಿನಗಳಿಂದ ಬೆಂಗಳೂರಿನ ಹೂಡಿ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರ ಆಯೋಜಿಸಿತ್ತು. ಡಿ. 26ರಂದು ಪ್ರಕಟಿಸಿದ 12 ಸದಸ್ಯರ ಕರ್ನಾಟಕ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಹಾಗೂ ರಾಣಿಬೆನ್ನೂರಿನ ರಾಜರಾಜೇಶ್ವರಿ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಕಬಡ್ಡಿ ತರಬೇತಿ ಪಡೆದಿದ್ದು, ಚಿತ್ರದುರ್ಗದಲ್ಲಿ ಜರುಗಿದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಅಧ್ಯಕ್ಷ ಮಂಜಣ್ಣ ಎಲಿ, ಉಪಾಧ್ಯಕ್ಷರಾದ ಕರಬಸಪ್ಪ ಬಳ್ಳಾರಿ, ಪ್ರಕಾಶ ಹಾವೇರಿ, ಖಜಾಂಚಿ ಗಂಗಣ್ಣ ಎಲಿ, ಕಾರ್ಯದರ್ಶಿ ಶಿವಾನಂದ ಮಲ್ಲನಗೌಡರ, ಸಹ ಕಾರ್ಯದರ್ಶಿ ಎನ್.ಎಂ. ದೇಸೂರ, ತೀರ್ಪುಗಾರರ ಮಂಡಳಿ ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಸದಸ್ಯರಾದ ಜಿನ್ನಾ ಹಲಗೇರಿ, ಸವಿತಾ ಗೌಡಶಿವಣ್ಣನವರ, ರವಿ ದೊಡ್ಡಣ್ಣವರ, ಎ.ಟಿ. ಪೀಠದ, ಎಂ.ಆರ್. ಕೋಡಿಹಳ್ಳಿ, ವಿ.ಆರ್. ಬಾಸೂರ ಅಭಿನಂದಿಸಿದ್ದಾರೆ.
ನಾಳೆ ಪೊಲೀಸ್ ಕ್ರೀಡಾಕೂಟ
ಹಾವೇರಿ: ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಡಿ. 29ರಂದು ಬೆಳಗ್ಗೆ 8 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಉದ್ಘಾಟಿಸುವರು. ಡಿ. 30ರಂದು ಸಮಾರೋಪ ಸಮಾರಂಭದಲ್ಲಿ ಬೆಳಗಾವಿ ಉತ್ತರ ವಲಯ ಮಹಾನಿರೀಕ್ಷಕ ಭಾಸ್ಕರ್ ರಾವ್ ಭಾಗವಹಿಸುವರೆಂದು ಎಸ್ಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್‌ಗೆ ಆಯ್ಕೆ
ಶಿಗ್ಗಾಂವಿ: ಹುಲಗೂರ ಗ್ರಾಮದ ಲಲಿತಾ ಮ. ದ್ಯಾಪನಗೌಡ್ರ ಅವರನ್ನು ತಾಲೂಕು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಮಂಜುಳಾ ರವಿಶಂಕರ ಬಾಳೀಕಾಯಿ ಆದೇಶದ ಮೇರೆಗೆ ಈ ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement