ಜ. 5ರಿಂದ ಹುಕ್ಕೇರಿ ಮಠದಲ್ಲಿ ಶ್ರೀದ್ವಯರ ಪುಣ್ಯಸ್ಮರಣೆ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 27
ಹುಕ್ಕೇರಿ ಮಠದ ಶಿವಬಸವ ಮಹಾಶಿವಯೋಗಿಗಳ 68ನೇ ಹಾಗೂ ಶಿವಲಿಂಗ ಮಹಾಶಿವಯೋಗಿಗಳ 5ನೇ ಪುಣ್ಯ ಸ್ಮರಣೋತ್ಸವ ಜ. 5ರಿಂದ 11ರ ವರೆಗೆ ನಡೆಯಲಿದ್ದು, ಸಂಗೀತ. ಭಕ್ತಿ, ದಾಸೋಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ಮಠದ ಸದಾಶಿವ ಸ್ವಾಮೀಜಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವಿರ ನೀಡಿದರು. ಲಿಂ. ಶಿವಬಸವ ಸ್ವಾಮೀಜಿ ಹಾಗೂ ಲಿಂ. ಶಿವಲಿಂಗ ಸ್ವಾಮೀಜಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಗಳ ಸನ್ನಿಧಿಯಲ್ಲಿ ನಡೆಯಲಿದೆ. ಜ. 5ರಂದು ಬೆಳಗ್ಗೆ 8.30ಕ್ಕೆ ಷಟ್ಸ್ಥಲ ಧ್ವಜಾರೋಹಣವನ್ನು ಶಿರಸಿ ಬಣ್ಣದಮಠದ ಶಿವಲಿಂಗ ಸ್ವಾಮೀಜಿ ನೆರವೇರಿಸಲಿದ್ದಾರೆ. ಸಂಜೆ ಶಿರಸಿ ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಾವಣಗೆರೆಯ ಜಡೇಸಿದ್ದ ಶಿವಯೋಗೀಶ್ವರ ಮಠದ ಶಿವಾನಂದ ಸ್ವಾಮೀಜಿ ಉಪದೇಶ ನೀಡಲಿದ್ದಾರೆ. ಡಾ ಜಗದೀಶ ಹೊಸಮನಿ ಆಗಮಿಸುವರು. ಶಿರಸಿಯ ಶ್ರುತಿ ಎನ್. ಬೋಡೆ ಸಂಗೀತ, ಮೇಘನಾ ಸ್ಯಾಕ್ಸೋಫೋನ್ ವಾದನ, ಹುಕ್ಕೇರಿ ಮಠದ ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ಭಕ್ತಿ ಸೇವೆ ನಡೆಯಲಿದೆ.
ರೊಟ್ಟಿ ಜಾತ್ರೆ: ಪ್ರಥಮ ಬಾರಿಗೆ ಜ. 6ರಂದು ರೊಟ್ಟಿ ಜಾತ್ರೆ ನಡೆಸಲಾಗುತ್ತಿದೆ. 15 ಗ್ರಾಮಗಳಿಂದ 50 ಸಾವಿರಕ್ಕೂ ಹೆಚ್ಚು ರೊಟ್ಟಿ ಸೇವೆ ನಡೆಯಲಿದ್ದು, ಭಕ್ತರು ನೀಡಿದ ರೊಟ್ಟಿಯನ್ನು ಚಕ್ಕಡಿ ಗಾಡಿಯಲ್ಲಿಟ್ಟು ಮೆರವಣಿಗೆ ಮಾಡಲಾಗುವುದು. ಸಂಜೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹರಸೂರು ಬಣ್ಣದಮಠದ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಕವಿ ಇಟಗಿ ಈರಣ್ಣ ವಚನ ವಿಶ್ಲೇಷಣೆ ಕುರಿತು ಮಾತನಾಡಲಿದ್ದಾರೆ. ಷಡಕ್ಷರಪ್ಪ ಸಿದ್ರಾಮಪ್ಪ ಮುಷ್ಠಿ ಅವರಿಂದ ಭಕ್ತಿ ಸೇವೆ, ಶಿವಬಸಪ್ಪ ಶರಣಪ್ಪ ಹುರಳಿಕುಪ್ಪಿ ದಾಸೋಹ ಸೇವೆ ನೀಡಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಜ. 7ರಂದು ಸಂಜೆ 6.30ಕ್ಕೆ ಮುಂಡರಗಿ ಸಂಸ್ಥಾನಮಠದ ನಾಡೋಜ ಡಾ ಅನ್ನದಾನೀಶ್ವರ ಮಹಾಶಿವಯೋಗಿಗಳಿಗೆ ಗೌರವಾಭಿನಂದನೆ ನಡೆಯಲಿದ್ದು, ಘಟಪ್ರಭಾ ಗೂಬಲಗುಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ರಾಯನಾಳ ವಿರಕ್ತಮಠದ ಮಹಾಂತ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಜ. 8ರಂದು ಸಂಜೆ 6.30ಕ್ಕೆ ಹುಬ್ಬಳ್ಳಿ ಎರಡೆತ್ತಿನಮಠದ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹುಕ್ಕೇರಿ ಗುರುಶಾಂತೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಗರಖೇಡ ವಿರಕ್ತಮಠದ ಅಭಿನವ ಪ್ರಭು ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಗೊಟಗೋಡಿ ಕರ್ನಾಟಕ ಜಾನಪದ ವಿವಿ ಕುಲಪತಿ ಅಂಬಳಿಕೆ ಹಿರಿಯಣ್ಣಗೆ ಸನ್ಮಾನ, ಎಚ್. ಗೋಪಾಲ್ರಿಂದ ಮಿಮಿಕ್ರಿ, ಭಕ್ತಿ ಹಾಗೂ ದಾಸೋಹ ಸೇವೆ ನಡೆಯಲಿದೆ ಎಂದು ಸದಾಶಿವ ಶ್ರೀಗಳು ತಿಳಿಸಿದರು.
ಜ. 9ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಖಂಡಿ ಓಲೇಮಠದ ಡಾ ಅಭಿನವಕುಮಾರ ಚನ್ನಬಸವ ಸ್ವಾಮೀಜಿ ವಹಿಸಲಿದ್ದು, ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಮೃತ್ಯುಂಜಯ ಅಗಡಿ ಅವರಿಂದ ಸಂಗೀತ ಸೇವೆ ಜರುಗಲಿದೆ. ಜ. 10ರಂದು ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಬಾಳೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮಾದನಹಿಪ್ಪರಗಿ ಮಠದ ಮಹಾಂತದೇವರು ಸಮ್ಮುಖ ವಹಿಸಲಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಭಜಂತ್ರಿ ಅವರನ್ನು ಸನ್ಮಾನಿಸಲಾಗುವುದು. ಜ. 11ರಂದು ಉಭಯ ಸ್ವಾಮೀಜಿಗಳ ಪುಣ್ಯ ದಿನಾಚರಣೆ ನಿಮಿತ್ತ ಬೆಳಗ್ಗೆ 8 ಗಂಟೆಗೆ ಶ್ರೀಗಳ ಗದ್ದುಗೆಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾ ಸಮಾರಾಧನೆ, ಸಂಜೆ 4ಕ್ಕೆ ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದರು.
ಜಾತ್ರಾ ಸಮಿತಿ ಅಧ್ಯಕ್ಷ ವಿಜಯ ಚಿನ್ನಿಕಟ್ಟಿ, ಗಣೇಶಣ್ಣ ಹೂಗಾರ, ಸೋಮಣ್ಣ ಮುಷ್ಠಿ, ಬಸವರಾಜಪ್ಪ ಕಲ್ಯಾಶೆಟ್ಟಿ, ಪುಂಡಲೀಕಪ್ಪ ಶಿರೂರು ಇದ್ದರು.