ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬ್ಯಾಡಗಿ ಬರಪೀಡಿತ ತಾಲೂಕೆಂದು ಘೋಷಿಸಿ

Vishwanath S
Updated On : 28 Dec 2013, 11:14 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 27
ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಕಳಪೆ ಬೀಜದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬ್ಯಾಡಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ತಾಲೂಕು ರೈತ ಹೋರಾಟ ಸಮಿತಿಯ ಸದಸ್ಯರು ತಹಸೀಲ್ದಾರ್ ಶಿವಶಂಕರ ನಾಯಕ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಮಿತಿ ಗೌರವಾಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ಪ್ರಸಕ್ತ ವರ್ಷ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರೂ ಯಾವುದೇ ಬೆಳೆ ರೈತನ ಕೈ ಸೇರಿಲ್ಲ. ಹತ್ತಿ ಕಳಪೆ ಬೀಜದಿಂದಾಗಿ ವರ್ಷವಿಡೀ ಹೋರಾಟದಲ್ಲೇ ಕಾಲ ಕಳೆಯಬೇಕಾದ ಸ್ಥಿತಿ ರೈತರಿಗೆ ಬಂದೊದಗಿದೆ ಎಂದರು.
ಅತಿಹೆಚ್ಚು ಮಳೆಯಾಗಿದ್ದರಿಂದ ಜಾನುವಾರುಗಳಿಗೂ ಮೇವು ಸಿಗುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಜಾನುವಾರುಗಳನ್ನು ಸಿಕ್ಕ ದರಕ್ಕೆ ಮಾರಾಟ ಮಾಡಬೇಕಾಗುತ್ತದೆ. ತೇವಾಂಶ ಪ್ರಮಾಣ ಹೆಚ್ಚಾಗಿದ್ದರಿಂದ ಹಿಂಗಾರು ಕೂಡ ಕೈಕೊಡುವ ನಿರೀಕ್ಷೆಯಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ತಾಲೂಕಿನ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕೂಡಲೇ ಕೇಂದ್ರದ ಬರ ಅಧ್ಯಯನ ತಂಡ ಬ್ಯಾಡಗಿ ತಾಲೂಕಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ತಾಲೂಕಿನಾದ್ಯಂತ ತೀವ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಜಿಲ್ಲೆಯಲ್ಲಿ ಹಾವೇರಿ, ಹಾನಗಲ್, ಶಿಗ್ಗಾಂವಿ ಹಾಗೂ ಸವಣೂರನ್ನು ಬರಪೀಡಿತ ಎಂದು ತಾಲೂಕುಗಳೆಂದು ಘೋಷಿಸಿಲಾಗಿದ್ದು, ಬ್ಯಾಡಗಿಯನ್ನೂ ಸೇರಿಸುವಂತೆ ಆಗ್ರಹಿಸಿದರು.
ಎಪಿಎಂಸಿ ಸದಸ್ಯ ಜಗದೀಶ ಕಣಗಲಬಾವಿ, ಬಸವರಾಜ ಸಂಕಣ್ಣನವರ, ಗಂಗಪ್ಪ ಕಲ್ಲಾಪುರ, ಈರಪ್ಪ ಸಂಕಣ್ಣನವರ, ಶಂಭಣ್ಣ ಹೊನ್ನಪ್ಪನವರ, ನಾಗಪ್ಪ ಹುಲ್ಮನಿ, ರಾಮಣ್ಣ ಹಡಗಲಿ, ಶಿದ್ಲಿಂಗಪ್ಪ ಮಲ್ಲಾಡದ, ಶಿವಪ್ಪ ದೊಡ್ಮನಿ, ವೀರಭದ್ರಯ್ಯ ವಸ್ತ್ರದ, ರುದ್ರಣ್ಣ ಹೊಸಮನಿ, ಶಶಿಧರಯ್ಯ ಗೊಲ್ಲರಹಳ್ಳಿಮಠ, ರಾಜಶೇಖರ ಚೆನ್ನಗೌಡ್ರ, ಬಸಣ್ಣ ಯಕಲಾಸಪುರ, ಬಸಣ್ಣ ಕಾಕೋಳ, ವೀರಪ್ಪ ಯಲಿ, ಮುತ್ತಣ್ಣ ಸಂಕಣ್ಣನವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement