ಸಭೆ ವಿಳಂಬ: ಗ್ರಾಪಂಗೆ ಬೀಗ
ಶಿಗ್ಗಾಂವಿ: ಸಾಮಾನ್ಯ ಸಭೆಗೆ ಸಮಯಕ್ಕೆ ಸದಸ್ಯರು ಆಗಮಿಸಿ ಎರಡು ಗಂಟೆ ಕಾದು ಕುಳಿತರೂ ಬಾರದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಆಕ್ರೋಶಗೊಂಡು ಗ್ರಾಪಂ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಹಿರೇಮಲ್ಲೂರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗುರುವಾರ ನಡೆದಿದೆ.
ಬೆಳಗ್ಗೆ 11 ಗಂಟೆಗೆ ಗ್ರಾಪಂ ಸಾಮಾನ್ಯ ಸಭೆ ನಿಗದಿಯಾಗಿತ್ತು. ನಿಗದಿಯಂತೆ ಸಭೆಗೆ ಸದಸ್ಯರು ಆಗಮಿಸಿದ್ದರು. ಆದರೆ ಪಿಡಿಒ ಪಾರ್ವತಿ ಡಂಬಳ ಮಾತ್ರ ಬಂದಿರಲಿಲ್ಲ. ಈಗ-ಆಗ ಬರಬಹುದು ಎಂಬ ನಿರೀಕ್ಷೆ ಹೊಂದಿದ್ದ ಸದಸ್ಯರು ಎರಡು ಗಂಟೆ ದಾರಿ ಕಾದು ಸುಸ್ತಾದರು. ಪಿಡಿಒ ದಾರಿ ಕಾಯುತ್ತಿದ್ದ ಸದಸ್ಯರನ್ನು ನೋಡಿ ಸಾರ್ವಜನಿಕರು ವ್ಯಂಗ್ಯ ಮಾಡಲಾರಂಭಿಸಿದರು. ಅದರಿಂದ ಅಕ್ರೋಶಗೊಂಡ ಅಧ್ಯಕ್ಷೆ-ಸದಸ್ಯರು ಪಿಡಿಒಗೆ ಕರೆ ಮಾಡಿ, ಸಭೆಗೆ ತಕ್ಷಣ ಆಗಮಿಸುವಂತೆ ಹೇಳಿದರು. ಮನೆಯಲ್ಲಿ ಸಮಸ್ಯೆ ಉಂಟಾಗಿದೆ. ನಾನು ಬರುವ ವರೆಗೆ ಕಾಯಿರಿ ಎಂದು ಪಿಡಿಒ ಹೇಳಿದ್ದರಿಂದ ಕೆರಳಿದ ಸದಸ್ಯರು ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆಗೆ ಇಳಿದರು.
ಒಂದು ಗಂಟೆ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದ ಸದಸ್ಯರು, ಅನಂತರ ತಾಪಂ ಅಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿ ಪಿಡಿಒ ಬದಲಿಸಿ, ಇಲ್ಲ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಇಷ್ಟೆಲ್ಲ ಘಟನೆ ನಡೆದ ಬಳಿಕ ಎರಡು ಗಂಟೆಗಳ ತಡವಾಗಿ ಪಿಡಿಒ ಆಗಮಿಸಿದರು. ಆದರೂ ತೃಪ್ತರಾಗದ ಸದಸ್ಯರು, ಅವರನ್ನು ವರ್ಗಾವಣೆ ಮಾಡಿ ಎಂದು ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷೆ ನಿರ್ಮಲಾ ಹರಿಜನ, ಸದಸ್ಯರಾದ ಸಹದೇವಪ್ಪ ಗಂಜೀಗಟ್ಟಿ, ಮಂಜುಳಾ ಕಂಕಣವಾಡ, ಚನ್ನವೀರಗೌಡ ಕರೇಗೌಡ್ರ, ಪುಟ್ಟಮ್ಮ ಹುರಳಿ, ಶೇಖವ್ವ ವಾಲ್ಮೀಕಿ, ಹನುಮಂತಪ್ಪ ದ್ಯಾಮಣ್ಣನವರ, ಶೆಂಕ್ರಮ್ಮ ಕೌಜಗೇರಿ, ಶಿವಲಿಂಗಪ್ಪ ದೊಡ್ಡಮನಿ ಇದ್ದರು.